ಬೆಂಗಳೂರು,ಮಾ.28- ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಯ ಪ್ರಮುಖ ರಾಷ್ಟ್ರೀಯ ನಾಯಕರು, ಪಕ್ಷದ ಅಭ್ಯರ್ಥಿಗಳ ಪರ ಕರ್ನಾಟಕದಲ್ಲಿ ಪ್ರಚಾರಕ್ಕೆ ಧುಮುಕಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಬಿಜೆಪಿ ನಾಯಕರು ಮುಂದಿನ ಕೆಲವು ವಾರಗಳಲ್ಲಿ ಕನಿಷ್ಠ ಪಕ್ಷ 2-3 ಬಾರಿ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮತದಾರರನ್ನು ತಲುಪಲು ಬಿಜೆಪಿ ಮೆಗಾ ರ್ಯಾಲಿಗಳು ಸೇರಿದಂತೆ ಕನಿಷ್ಠ 70 ಸಮಾವೇಶಗಳನ್ನು ಆಯೋಜಿಸುತ್ತಿದೆ.
ಲೋಕಸಭಾ ಚುನಾವಣೆಯ 2ನೇ ಹಂತದಲ್ಲಿ (ಏಪ್ರಿಲ್ 26) ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಇನ್ನು ಕೇವಲ ಒಂದು ತಿಂಗಳು ಬಾಕಿ ಉಳಿದಿದೆ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿ ರಾಜ್ಯ ತಂಡವು ಇದರ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ತಲಾ ನಾಲ್ಕು ಪ್ರಚಾರ ಸಮಿತಿಗಳನ್ನು ರಚಿಸಲಿದೆ. ಇದರೊಂದಿಗೆ ಕೇಂದ್ರ ನಾಯಕರನ್ನು ಒಳಗೊಂಡಿರುವ ತಂಡವನ್ನೂ ರಚಿಸಲಿದೆ. ಈ ತಂಡಗಳು ಪ್ರತಿದಿನ 2-3 ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿವೆ.
ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರು ಯಾವಾಗ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಬೇಕು, ಸಮಾವೇಶಗಳು ಹೇಗಿರಬೇಕು ಎಂಬ ಬಗ್ಗೆ ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಅದರಂತೆ, ಕೇಂದ್ರ ನಾಯಕರು ಪ್ರಚಾರಕ್ಕೆ ಬಂದಾಗ ವಿಜಯೇಂದ್ರ, ಅಶೋಕ ಅಥವಾ ಇತರ ರಾಜ್ಯ ನಾಯಕರು ಆ ಸಮಾವೇಶಗಳಿಗೆ ಹಾಜರಾಗುವುದಿಲ್ಲ. ಬದಲಾಗಿ ಈ ನಾಯಕರು ಬೇರೆ ಕಡೆ ಪ್ರಚಾರ ನಡೆಸಲಿದ್ದಾರೆ. ಆದರೆ, ಬಿಜೆಪಿಯ ಉನ್ನತ ನಾಯಕರು ಭಾಗವಹಿಸುವ ಈ ಎಲ್ಲಾ ಸಭೆಗಳಲ್ಲಿ ಯಡಿಯೂರಪ್ಪ ಉಪಸ್ಥಿತರಿರಲಿದ್ದಾರೆ.
ಬಿಜೆಪಿಯ ಹಿರಿಯ ನಾಯಕರೊಬ್ಬರ ಪ್ರಕಾರ, ಮೋದಿ ರಾಜ್ಯಕ್ಕೆ ಇನ್ನೂ ನಾಲ್ಕು ಬಾರಿ ಭೇಟಿ ನೀಡಲಿದ್ದಾರೆ. ಮೋದಿ ಈಗಾಗಲೇ ಶಿವಮೊಗ್ಗ ಹಾಗೂ ಕಲಬುರಗಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ಅದೇ ರೀತಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಾಲ್ಕು ಬಾರಿ, ಅಮಿತ್ ಶಾ ಆರು ಬಾರಿ ಮತ್ತು ಯೋಗಿ ಆದಿತ್ಯನಾಥ್ ನಾಲ್ಕು ಬಾರಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಮೋದಿ ಸಮಾವೇಶಗಳಿಗೆ ಹೇಗಿರಲಿದೆ ಸಿದ್ಧತೆ?:
ಪ್ರಚಾರಕ್ಕೆ ಸಂಬಂಧಪಟ್ಟ ಸಮಿತಿಯು ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ವಿವರಗಳನ್ನು ಸಂಗ್ರಹಿಸಲಿದೆ. ಪ್ರಧಾನಿಯವರ ಸಮಾವೇಶಗಳಲ್ಲಿ ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಕೆಲವು ನುಡಿಗಟ್ಟುಗಳನ್ನು ಉಲ್ಲೇಖಿಸಲು ಉದ್ದೇಶಿಸಲಾಗಿದೆ. ಸಮೀಕ್ಷೆಗಳು ಸೇರಿದಂತೆ ಎಲ್ಲಾ ಪೂರ್ವ ತಯಾರಿಯು ತಂತ್ರಜ್ಞಾನ ಆಧಾರಿತವಾಗಿದೆ. ಪ್ರಧಾನಿಯವರು ಮಾತನಾಡುವುದಕ್ಕೂ ಮುನ್ನ ಒಂದು ಕ್ಲಿಕ್‍ನಲ್ಲಿ ಅವರಿಗೆ ಎಲ್ಲ ಮಾಹಿತಿ ಲಭ್ಯ ಇರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ:
ಮಾರ್ಚ್ 29 ರಂದು ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದ್ದಾರೆ. ಇದಾದ ನಂತರ ಏಕಕಾಲಕ್ಕೆ ನಾಮಪತ್ರ ಸಲ್ಲಿಕೆ ಹಾಗೂ ಸಭೆಗಳು ನಡೆಯಲಿವೆ. ಮೈತ್ರಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಎರಡೂ ಪಕ್ಷಗಳ ಮುಖಂಡರು ಹಾಜರಿರಲಿದ್ದಾರೆ. ಪ್ರಧಾನಿಯವರ ಸಭೆಯೊಂದರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕೂಡ ಉಪಸ್ಥಿತರಿರಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.