ಬೆಂಗಳೂರು,ಮಾ.29-ಮೊದಲ ಹಂತದ ಮತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆಯಿಂದ ಸಾಗುತ್ತಿರುವ ಬೆನ್ನಲ್ಲೇ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ದಾಖಲೆ ಬರೆಯಲು ಮುಂದಾಗಿರುವ ಬಿಜೆಪಿಗೆ ಭಿನ್ನಮತವೇ ದೊಡ್ಡ ಸವಾಲಾಗಿ ಪರಿಣಮಿಸಿದೆ.ಮೇಲ್ನೋಟಕ್ಕೆ ಎಲ್ಲವ ಸರಿ ಹೋಗಿದೆ ಎಂದು ನಾಯಕರು ಮಾಧ್ಯಮಗಳ ಮುಂದೆ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರಾದರೂ ಆಂತರಿಕವಾಗಿ 8ರಿಂದ 10 ಜಿಲ್ಲೆಗಳಲ್ಲಿ ಈಗಲೂ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದೆ.
ಯಾವುದೇ ಕ್ಷಣದಲ್ಲಿ ಈ ಭಿನ್ನಮತ ಸ್ಪೋಟಗೊಳ್ಳುವ ಸಾಧ್ಯತೆ ಇದ್ದು, ಅಕೃತ ಅಭ್ಯರ್ಥಿಗಳಿಗೆ ಒಳಹೊಡೆತದ ಗುಮ್ಮ ಬಿಟ್ಟುಬಿಡದಂತೆ ಕಾಡುತ್ತಿದೆ.ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ರಾಯಚೂರು, ಬೆಳಗಾವಿ, ಶಿವಮೊಗ್ಗ, ತುಮಕೂರು ಸೇರಿದಂತೆ ಮತ್ತಿತರ ಕಡೆ ಟಿಕೆಟ್ ವಂಚಿತರ ಮುನಿಸು ತಣ್ಣಗಾಗುತ್ತಿಲ್ಲ.
ತಮ್ಮ ಆಪ್ತರು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸುವ ಮೂಲಕ ಪಕ್ಷದ ಆದೇಶವನ್ನು ಕ್ಕರಿಸುತ್ತಿರುವುದು ವರಿಷ್ಠರು ತಲೆಬಿಸಿ ಮಾಡಿದೆ. ಚಿತ್ರದುರ್ಗದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಸಿಗದಿರುವುದಕ್ಕೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಬಹಿರಂಗವಾಗಿಯೇ ಸಮರ ಸಾರಿದ್ದಾರೆ.ನನಗೆ ಟಿಕೆಟ್ ತಪ್ಪಲು ಯಡಿಯೂರಪ್ಪನವರೇ ಕಾರಣ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಮಾಡಿರುವುದು ಬಿಜೆಪಿ ನಾಯಕರ ನಿದ್ದೆಗೆಡುವಂತೆ ಮಾಡಿದೆ.
ಇದೀಗ ಚಂದ್ರಪ್ಪ ಅವರ ಮನವೊಲಿಸಲು ಖುದ್ದು ಮಾಜಿ ಮುಖ್ಯಮಂತ್ರಿ ಅಖಾಡಕ್ಕಿಳಿದಿದ್ದಾರೆ. ದಾವಣಗೆರೆಯಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ವರಿಷ್ಠರು ಸಮಾಧಾನಪಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ದಾವಣಗೆರೆ ಲೋಕಸಭಾ ಚುನಾವಣೆಯ ಸಂಚಾಲಕರನ್ನಾಗಿ ರೇಣುಕಾಚಾರ್ಯ ಅವರನ್ನು ನೇಮಿಸಿ ಭಿನ್ನಮತವನ್ನು ಶಮನಗೊಳಿಸುವ ಪ್ರಯತ್ನ ಮಾಡಲಾಗಿದೆ.
ರಾಯಚೂರಿನಲ್ಲಿ ಮಾತ್ರ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಟಿಕೆಟ್ ಕೈತಪ್ಪಿರುವ ಹಿನ್ನಲೆಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕ್ ಹಾಗೂ ಎಸ್ಟಿ ಮೊರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜ್ ಹವಾಲ್ದಾರ್ ಮುನಿಸಿಕೊಂಡಿದ್ದಾರೆ. ಇಬ್ಬರು ಉಭಯ ನಾಯಕರನ್ನು ಸಮಾಧಾನಪಡಿಸುವ ಪ್ರಯತ್ನ ವಿಫಲವಾಗಿದೆ. ಹಾಲಿ ಸಂಸದ ಅಮರೇಶ್ ನಾಯಕ್‍ಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಇಬ್ಬರು ಕಡೆಯ ಬೆಂಬಲಿಗರು ಅಕೃತ ಅಭ್ಯರ್ಥಿಗೆ ಗೋ ಬ್ಯಾಕ್ ಅಭಿಯಾನವನ್ನು ಆರಂಭಿಸಿದೆ.
ರಾಯಚೂರಿನಲ್ಲೂ ರಾಷ್ಟ್ರೀಯ ನಾಯಕರೇ ಮಧ್ಯಪ್ರವೇಶ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಳಗಾವಿಯಲ್ಲಿ ಮೊದಲ ದಿನ ಯಡಿಯೂರಪ್ಪ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದ ಜಿಲ್ಲಾ ನಾಯಕರು ಇದೀಗ ತಮ್ಮ ವರಸೆ ಬದಲಾಯಿಸಿದ್ದಾರೆ.
ಬಿಎಸ್‍ವೈ ವಿರುದ್ಧ ಮುನಿಸು:
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಸಿಡಿದೆದ್ದಿದ್ದರು. ಇದೀಗ ಲೋಕಸಭಾ ಚುನಾವಣೆ ವೇಳೆಯಲ್ಲಿ ಯಡಿಯೂರಪ್ಪ ವಿರುದ್ಧ ರಾಜ್ಯದ ನಾಯಕರು ಸಿಡಿದೇಳುತ್ತಿದ್ದಾರೆ. ತನ್ನ ಪುತ್ರ ಕೆಈ ಕಾಂತೇಶ್‍ಗೆ ಹಾವೇರಿ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಬಿಜೆಪಿಯ ಕಟ್ಟಾಳು ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಬಿಎಸ್‍ವೈ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದಾರೆ.
ಹೌದು, ಯಡಿಯೂರಪ್ಪ ಹಿಡಿತದಿಂದ ಬಿಜೆಪಿಯನ್ನು ಮುಕ್ತಿಗೊಳಿಸುವುದಾಗಿ ಶಪಥ ಮಾಡಿದ ಈಶ್ವರಪ್ಪ ಅವರು, ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ರ್ಪಸಲು ಮುಂದಾಗಿದ್ದಾರೆ. ಹೋದಲ್ಲಿ ಬಂದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣದ ಆರೋಪವನ್ನೂ ಮಾಡುತ್ತಿದ್ದಾರೆ.
ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರು ಯಡಿಯೂರಪ್ಪ ವಿರುದ್ಧ ಗುಡುಗಿದ್ದರು. ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದ ನನ್ನನ್ನು ಮತ್ತೆ ಟಿಕೆಟ್ ಕೊಡಿಸುತ್ತೇವೆ ಎಂದು ಭರವಸೆ ನೀಡಿ ಕೈಕೊಟ್ಟರು ಎಂದು ಸದಾನಂದಗೌಡ ಅವರು ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಸುದ್ದಿಗೋಷ್ಠಿ ನಡೆಸಿ ಬಿಜೆಪಿಯ ಪರಿವಾರ (ಯಡಿಯೂರಪ್ಪ ಮತ್ತು ಪುತ್ರರ ಅಧಿಕಾರ) ರಾಜಕಾರಣದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಕೇಂದ್ರದ ನಾಯಕರು, ಆರ್‍ಎಸ್‍ಎಸ್ ನಾಯಕರ ಮಧ್ಯಪ್ರವೇಶದಿಂದ ಸದಾನಂದಗೌಡರು ಮೌನವಾಗಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಮಾಜಿ ಸಚಿವ ಸಿಟಿ ರವಿ ಕಣ್ಣಿಟ್ಟಿದ್ದರು. ಆದರೆ, ಶೋಭಾ ಕರಂದ್ಲಾಜೆ ಮತ್ತು ಸಿಟಿ ರವಿ ಬೆಂಬಲಿಗರ ನಡುವೆ ವಾಕ್ಸಮರ ನಡೆಯಿತು. ಹೀಗಾಗಿ ಇಬ್ಬರಿಗೂ ಟಿಕೆಟ್ ನೀಡದ ಹೈಕಮಾಂಡ್, ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕ್ಷೇತ್ರದಲ್ಲಿ ಮಣೆ ಹಾಕಿದೆ. ಆದರೆ ಶೋಭಾ ಕರಂದ್ಲಾಜೆ ಅವರಿಗೆ ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಅವರು ಹಾಲಿ ಸಂಸದರಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರವಾಗಿ ಸಿ.ಟಿ.ರವಿ ಯಡಿಯೂರಪ್ಪ ಅವರ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ.