ಬೆಂಗಳೂರು,ಮಾ.30- ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸ್ಟಾರ್ ಕ್ಯಾಂಪೇನರ್‍ಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದೆ. ಬಿಜೆಪಿ ವರಿಷ್ಠ ನಾಯಕರ ಜೊತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 40 ನಾಯಕರ ಪಟ್ಟಿ ಬಿಡುಗಡೆ ಆಗಿದೆ. ಬಿ.ಎಲ್.ಸಂತೋಷ್ ಅವರನ್ನು ಪಟ್ಟಿಯಿಂದ ಹೊರಗಿಟ್ಟಿದ್ದು, ಯಡಿಯೂರಪ್ಪ ಅಭ್ಯರ್ಥಿಗಳ ಆಯ್ಕೆಯಂತೆ ತಾರಾ ಪ್ರಚಾರಕರ ಪಟ್ಟಿಯಲ್ಲೂ ಮೇಲುಗೈ ಸಾಧಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಸ್ಸೋಂ ಮುಖ್ಯಮಂತ್ರಿ ಹೇಮಂತ ಬಿಸ್ವಾ ಶರ್ಮ, ಗೋವಾ ಸಿಎಂ ಪ್ರಮೋದ್ ಸಾವಂತ್, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್, ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ, ಯಡಿಯೂರಪ್ಪ ಸೇರಿದಂತೆ ರಾಜ್ಯದ ನಾಲ್ವರು ಮಾಜಿ ಸಿಎಂಗಳು ಹಾಗೂ ಟಿಕೆಟ್ ಕೈತಪ್ಪಿದ ನಳೀನ್‍ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಎ.ನಾರಾಯಣಸ್ವಾಮಿ, ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರೀತಂಗೌಡ ಸೇರಿದಂತೆ 40 ಮಂದಿ ಸ್ಟಾರ್ ಕ್ಯಾಂಪೇನರ್‍ಗಳಾಗಿ ಆಯ್ಕೆಯಾಗಿದ್ದಾರೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಜೈ ಶಂಕರ್, ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ ಜೊತೆಗೆ ಬಿಜೆಪಿ ಅಭ್ಯರ್ಥಿಗಳಾಗಿರುವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಬಿ.ಶ್ರೀರಾಮುಲು ಕೂಡ ಸ್ಟಾರ್ ಕ್ಯಾಂಪೆನರ್‍ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‍ವಾಲ್, ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ವಿ ರಾಜೇಶ್, ಸಂಘಟನೆಯಲ್ಲಿರುವ ಸುನೀಲ್ ಕುಮಾರ್‍ಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದ ದೂರ ಇಡಲಾಗಿದ್ದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್ ಸಂತೋಷ್?ಗೆ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿಲ್ಲ. ಬಿಜೆಪಿ ವಿರುದ್ಧ ಬಂಡಾಯ ಸಾರಿರುವ ಕೆ.ಎಸ್.ಈಶ್ವರಪ್ಪಗೂ ಸಹ ಕೋಕ್ ನೀಡಲಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿಗೂ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ.