ಬೆಂಗಳೂರು,ಮಾ.30- ಪ್ರಸಕ್ತ ಲೋಕಸಭೆ ಸಾರ್ವತ್ರಿಕ ಚುನಾವಣೆ ಮಾದರಿ ನೀತಿಸಂಹಿತೆಯನ್ನು ಬಿಗಿಗೊಳಿಸಿರುವ ಭಾರತದ ಚುನಾವಣಾ ಆಯೋಗ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನಗಳ ಚಲನವಲನಗಳ ಮೇಲೆ ನಿಗಾವಹಿಸಲು ಸೂಚಿಸಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚುನಾವಣಾ ಅಕ್ರಮ ತಡೆಯುವ ದೃಷ್ಟಿಯಿಂದ ಕ್ಷಿಪ್ರ ಪಡೆ(ಎಫ್‍ಎಸ್‍ಟಿ) ತಂಡವನ್ನು ನಿಯೋಜಿಸಲು ಸೂಚಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾ ಅಧಿಕಾರಿ ದೇವನಹಳ್ಳಿ ಚುನಾವಣಾಧಿಕಾರಿಗೆ ಎಫ್‍ಎಸ್‍ಟಿ ತಂಡವನ್ನು ವಿಮಾನ ನಿಲ್ದಾಣದಲ್ಲಿ ನಿಯೋಜಿಸಲು ಸೂಚಿಸಿದ್ದಾರೆ.
ಆಯೋಗದ ಮಾರ್ಗಸೂಚಿಯಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಖಾಸಗಿ ವಿಮಾನಗಳ ಚಲನವಲನಗಳ ಮೇಲೆ ನಿಗಾವಹಿಸಲು ಎಫ್‍ಎಸ್‍ಟಿ ತಂಡಕ್ಕೆ ಸೂಚಿಸಲಾಗಿದೆ.
ಖಾಸಗಿ ವಿಮಾನದಲ್ಲಿ ಆಗಮಿಸುವ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲು ಕ್ರಮವಹಿಸುವಂತೆ ಸೂಚಿಸಿದ್ದು, ಪ್ರತಿದಿನ ಕೈಗೊಂಡ ಕ್ರಮದ ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ದೇವನಹಳ್ಳಿ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.