ಬೆಳಗಾವಿ,ಡಿ.19- ಎರಡೂವರೆ ವರ್ಷಗಳಿಗೆ ಮಾತ್ರ ಮುಖ್ಯಮಂತ್ರಿ ಹುದ್ದೆ ಎಂದು ತೀರ್ಮಾನ ವಾಗಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನ ಮಾಡಿದರೆ ಮುಂದೆಯೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಹೈಕಮಾಂಡ್ ನನ್ನ ಪರವಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳುವ ಮೂಲಕ ಪ್ರಸ್ತುತ ರಾಜಕೀಯ ಬೆಳವಣಿಗೆಗಳಲ್ಲಿ ಮಹತ್ವದ ಸಂದೇಶ ರವಾನಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಪ್ರದೇಶಗಳ ಅಭಿವೃದ್ಧಿಯ ಕುರಿತ ಚರ್ಚೆಗೆ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಉತ್ತರ ನೀಡುವಾಗ ಕರ್ಮ ಸಿದ್ಧಾಂತದ ಬಗ್ಗೆ ಪ್ರಸ್ತಾಪ ಮಾಡಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಧ್ಯ ಪ್ರವೇಶಿಸಿ, ನಾವೆಲ್ಲಾ ಬ್ರಹನ ಬಳಿ ಹೆಚ್ಚು ಹೊತ್ತು ಇರದೇ ಬಂದು ಬಿಟ್ಟಿದ್ದೇವೆ. ಆದರೆ ಸಿದ್ದರಾಮಯ್ಯ ಅವರು ಬ್ರಹನ ಬಳಿ ಕುಳಿತುಕೊಂಡು 2013 ರಿಂದ 2018ರ ವರೆಗೂ 5 ವರ್ಷ ಮುಖ್ಯಮಂತ್ರಿ ಎಂದು ಖಚಿತವಾಗಿ ಬರೆಸಿಕೊಂಡು ಬಂದಿದ್ದರು. ಈಗ ಎರಡೂವರೆ ವರ್ಷ ಮಾತ್ರ ಎಂದು ಬರೆಯಲಾಗಿದೆ ಎಂದು ಕೆಣಕಿದರು.
ಇದು ನಿಮಗೆ ಹೇಗೆ ಗೊತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ. ನೀವು ಅಧಿಕಾರ ಹಂಚಿಕೆಗೆ ಕುರಿತಂತೆ ದೆಹಲಿ ವಿಮಾನ ಹತ್ತುವಾಗಿನಿಂದಲೂ ಹಿಡಿದು ತೀರ್ಮಾನವಾಗುವವರೆಗೂ ಪ್ರತಿ ಎರಡು ಗಂಟೆಗೆ ಒಮೆ ನನಗೆ ಫೋನ್ ಕರೆಯ ಮೂಲಕ ಮಾಹಿತಿ ಬರುತ್ತಿತ್ತು. ನಿಮಗೆ ಎರಡೂವರೆ ವರ್ಷ ಎಂದು ಗಡುವು ಬರೆದಿದ್ದಾರೆ. ಅದನ್ನು ಸರಿ ಮಾಡಿಕೊಳ್ಳಿ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಸಿದ ಸಿದ್ದರಾಮಯ್ಯ ನಮದು ಹೈಕಮಾಂಡ್ ಪಾರ್ಟಿ. ಮೊದಲ ಅವಧಿಗೆ 5 ವರ್ಷ ಮುಖ್ಯಮಂತ್ರಿ ಆಗಿ ಅಧಿಕಾರ ಪೂರೈಸಿದ್ದೇನೆ. ಈಗ ಹೈಕಮಾಂಡ್ ನನ್ನ ಪರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ನಿಮ ಸಮರ್ಥನೆಯನ್ನು ಮೆಚ್ಚಬೇಕು ಎಂದು ಬಿಜೆಪಿಯ ಆರಗ ಜ್ಞಾನೇಂದ್ರ, ವಿ.ಸುನೀಲ್ ಕುಮಾರ್ ಮತ್ತಿತರರು ಕೆಣಕಿದರು.ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಅಶೋಕ್ ಅವರಿಗೆ ವಿರೋಧ ಪಕ್ಷದ ನಾಯಕನಾಗಿ ಐದು ವರ್ಷ ಪೂರ್ಣಗೊಳಿಸುವ ವಿಶ್ವಾಸ ಇದೆಯೇ ಎಂದು ಸಿದ್ದರಾಮಯ್ಯ ಪ್ರತಿ ಸವಾಲು ಹಾಕಿದರು. ನಮಲ್ಲಿ ಅಶೋಕ್ ಐದು ವರ್ಷ ವಿರೋಧ ಪಕ್ಷದ ನಾಯಕರಾಗಿ ಇರುತ್ತಾರೆ. ನಮಗೆ ಆ ಬಗ್ಗೆ ಖಚಿತತೆ ಇದೆ. ನೀವು ಐದು ವರ್ಷ ಮುಖ್ಯಮಂತ್ರಿ ಆಗಿರುವ ವಿಶ್ವಾಸ ಇದೆಯೇ ಎಂದು ಸುನೀಲ್ ಕುಮಾರ್ ಪ್ರತಿ ಸವಾಲು ಹಾಕಿದರು.
ಶಾಸಕಾಂಗ ಸಭೆಯಲ್ಲಿ ನನ್ನನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಮುಖ್ಯಮಂತ್ರಿ ಆಗಿದ್ದೇನೆ. ಹೈಕಮಾಂಡ್ ತೀರ್ಮಾನಿಸಿದಂತೆ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಎರಡೂವರೆ ವರ್ಷ ಎಂದು ನಮಲ್ಲಿ ತೀರ್ಮಾನವಾಗಿಲ್ಲ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.
ಸಚಿವ ಕೆ.ಜೆ.ಜಾರ್ಜ್, ನಮ ಪಕ್ಷದ ವಿಚಾರ ಬಿಜೆಪಿಯವರಿಗೆ ಏಕೆ ಎಂದು ತರಾಟೆಗೆ ತೆಗೆದುಕೊಂಡರು.
ಹಿರಿಯ ಶಾಸಕ ಆರ್.ವಿ.ದೇಶಪಾಂಡೆ, ಎರಡೂವರೆ ವರ್ಷ ಅಧಿಕಾರ ಹಂಚಿಕೆಯೆಂದು ತೀರ್ಮಾನವಾಗಿಲ್ಲ ಅನವಶ್ಯಕವಾದ ಚರ್ಚೆ ಬೇಡ ಎಂದರು.ಪದೇ ಪದೇ ವಿರೋಧ ಪಕ್ಷಗಳ ಮೂದಲಿಕೆಗೆ ಪ್ರತಿಕ್ರಿಯಸಿದ ಸಿದ್ದರಾಮಯ್ಯ, ಈಗ ನಾನೇ ಮುಖ್ಯಮಂತ್ರಿ. ಮುಂದೆಯೂ ನಾನೇ ಇರುತ್ತೇನೆ ಎಂದು ದೃಢವಾಗಿ ಹೇಳಿದರು.
ಬಿಜೆಪಿಯ ಮುನಿರತ್ನ, ಈ ಹಿಂದೆ ನಿಮನ್ನು ಕೆಣಕಿದರೆ ತೋಳು ತಟ್ಟಿಕೊಂಡು ನಾನೇ ಇರುತ್ತೇನೆ ಎಂದು ಹೇಳುತ್ತಿದ್ದದ್ದನ್ನು ನೋಡಿದ್ದೇವೆ. ಈಗ ಒಮೆ ಅದೇ ರೀತಿ ತೋಳು ತಟ್ಟಿ ಹೇಳಿ. ಅದನ್ನು ನೋಡುವ ಆಸೆಯಾಗಿದೆ ಎಂದರು.ವಿರೋಧ ಪಕ್ಷಗಳ ಶಾಸಕರ ಪ್ರಚೋದನೆಗೆ ಉತ್ತರ ಎಂಬಂತೆ ಸಿದ್ದರಾಮಯ್ಯ, ಹಲವು ಬಾರಿ ತಾವೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಬೇಕಾಯಿತು. ಒಂದು ಹಂತದಲ್ಲಿ ಇದು ಅನವಶ್ಯಕ ಚರ್ಚೆ. ಇದನ್ನು ಬಿಟ್ಟು ಅಭಿವೃದ್ಧಿಯ ವಿಚಾರಗಳ ಬಗ್ಗೆ ಮಾತನಾಡೋಣ ಎಂದು ಸಿದ್ದರಾಮಯ್ಯ ವಿಷಯಾಂತರಿಸಿದರು.
