Friday, December 19, 2025
Homeರಾಜ್ಯನನಗೆ ರಾಜಕೀಯ ನಿಶ್ಶಕ್ತಿ ಇಲ್ಲ : ವಿಪಕ್ಷಗಳಿಗೆ ಸಿಎಂ ಸಿದ್ದು ತಿರುಗೇಟು

ನನಗೆ ರಾಜಕೀಯ ನಿಶ್ಶಕ್ತಿ ಇಲ್ಲ : ವಿಪಕ್ಷಗಳಿಗೆ ಸಿಎಂ ಸಿದ್ದು ತಿರುಗೇಟು

I have no political weakness. : CM Sidhu hits back at opposition parties

ಬೆಳಗಾವಿ,ಡಿ.19- ರಾಜಕೀಯವಾಗಿ ತಮಗೆ ಯಾವತ್ತೂ ನಿಶ್ಶಕ್ತಿ ಇಲ್ಲ, ಅಂತಹ ಸಂದರ್ಭವೂ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢವಾಗಿ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ವಿರೋಧ ಪಕ್ಷಗಳು ಹಾಗಿದ್ದರೆ ಐದು ವರ್ಷ ಅಧಿಕಾರ ಪೂರ್ಣಗೊಳಿಸುವುದು ಖಚಿತವೇ ಎಂದು ಕೆಣಕಿವೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಳೆದ ಎಂಟು ದಿನಗಳಲ್ಲಿ ನಡೆದ ಉತ್ತರ ಕರ್ನಾಟಕ ಅಭಿವೃದ್ಧಿಯ ಕುರಿತ ಚರ್ಚೆಗೆ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಉತ್ತರ ನೀಡಿದರು. ಆರಂಭದ ಪೀಠಿಕೆಯಲ್ಲಿ ಬೆಳಗಾವಿಯ ವಿಧಾನ ಮಂಡಲದ ಅಧಿವೇಶನ 2006ರಲ್ಲಿ ಆರಂಭವಾಯಿತು, ಅಂದಿನಿಂದ ಇಂದಿನವರೆಗಿನವರೆಗೂ ಕಲಾಪದ ಮೊದಲ ದಿನದಿಂದ ಕೊನೆಯವರೆಗೂ ಚರ್ಚೆ ನಡೆದು, ಕೊನೆಯ ದಿನ ಉತ್ತರ ನೀಡುತ್ತಿರುವುದು ಇದೇ ಮೊದಲು ಎನಿಸುತ್ತಿದೆ ಎಂದರು.

ನಾನು ನಿನ್ನೆಯೇ ಉತ್ತರ ನೀಡಬೇಕು ಎಂದುಕೊಂಡಿದ್ದೆ. ಆದರೆ ನಿಶ್ಶಕ್ತಿ ಕಾಡುತ್ತಿತ್ತು. ಅದಕ್ಕಾಗಿ ಇಂದು ಉತ್ತರ ನೀಡುತ್ತಿದ್ದೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಎದ್ದು ನಿಂತ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಈಗ ಶಕ್ತಿ ಬಂದಿದೆಯೇ. ಕಳೆದ ನಾಲ್ಕು ದಿನಗಳಿಂದಲೂ ನಿಮಲ್ಲಿ ನಿಶ್ಶಕ್ತಿ ಕಾಣುತ್ತಿತ್ತು. ಈಗ ನೋಡಿದರೆ ನಿಮಗೆ ರಾಜಕೀಯವಾಗಿಯೂ ಶಕ್ತಿ ಬಂದಿದೆ. ನಿಶ್ಶಕ್ತಿ ಹೋಗಿದೆ ಎಂದು ಕಾಣುತ್ತಿದೆ. ಆ ಶಕ್ತಿಯನ್ನು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹಣ ಬಿಡುಗಡೆಗೆ ಮಾಡಲು ಬಳಕೆ ಮಾಡಿ ಎಂದು ಹೇಳಿದರು.

ಉತ್ತರ ನೀಡಿದ ಸಿದ್ದರಾಮಯ್ಯ, ನನಗೆ ರಾಜಕೀಯವಾಗಿ ನಿಶ್ಶಕ್ತಿ ಬರಲು ಸಾಧ್ಯವೇ ಇಲ್ಲ. ಅಂತಹ ಅವಕಾಶಗಳಾಗಲಿ, ಸಂದರ್ಭಗಳಾಗಲಿ ಇಲ್ಲವೇ ಇಲ್ಲ. ರಾಜಕೀಯ ನಿಶ್ಶಕ್ತಿ ಇಲ್ಲ, ಶಾರೀರಿಕ ನಿಶ್ಶಕ್ತಿ ಇತ್ತು ಎಂದರು.ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಆರ್‌.ಅಶೋಕ್‌, ಪ್ರತಿ ದಿನ ಡಿನ್ನರ್‌ ಮೀಟಿಂಗ್‌ಗಳು ನಡೆಯುತ್ತಲೇ ಇವೆ ಕಿಚಾಯಿಸಿದರು.

ಬಿಜೆಪಿಯ ವಿ.ಸುನೀಲ್‌ ಕುಮಾರ್‌, ನಿಮ ಆರೋಗ್ಯದ ನಿಶ್ಶಕ್ತಿ ಬಗ್ಗೆ ಅನುಮಾನ ಇಲ್ಲ. ರಾಜಕೀಯ ನಿಶ್ಶಕ್ತಿಯ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೆ ರಾಜಕೀಯ ನಿಶ್ಶಕ್ತಿ ಯಾವಾಗಲೂ ಇಲ್ಲ ಹಾಗೂ ರಾಜಕೀಯವನ್ನು ಅಷ್ಟೊಂದು ತಲೆ ಕೆಡಿಸಿಕೊಂಡು ಮಾಡಬೇಕಾದ ಅಗತ್ಯವೂ ಇಲ್ಲ. ಅಧಿಕಾರವನ್ನು ಜನ ಕೊಡುತ್ತಾರೆ. ಅವರ ಆಶೀರ್ವಾದ ಇದ್ದರೆ ಆಡಳಿತ ಪಕ್ಷವಾಗುತ್ತೇವೆ, ಇಲ್ಲವಾದರೆ ವಿರೋಧ ಪಕ್ಷದಲ್ಲಿ ಕೂರಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ಅವರು ಹೇಳಿದಂತೆ ಕೇಳಬೇಕು. ನಮ್ಮ ಸಿದ್ಧಾಂತಗಳು ಏನೇ ಇದ್ದರೂ ಅಂತಿಮ ತೀರ್ಮಾನ ನೀಡುವುದು ಜನರು ಎಂದು ಹೇಳಿದರು.

ರಾಜಕೀಯವಾಗಿ ನಿಶ್ಶಕ್ತಿ ಎಂಬ ಪದ ನನ್ನ ಬಳಿ ಇಲ್ಲವೇ ಇಲ್ಲ. ರಾಜಕೀಯವಾಗಿ ನನ್ನ ಬಳಿ ಯಾವಾಗಲೂ ನಿಶ್ಶಕ್ತಿ ಇಲ್ಲ, ಈಗಲೂ ಇಲ್ಲ ಮುಂದೆಯೂ ಇರುವುದಿಲ್ಲ ಇಂತಹ ತಪ್ಪು ತಿಳಿವಳಿಕೆಗಳು ವಿರೋಧ ಪಕ್ಷಗಳಿಗೆ ಬೇಡ ಎಂದರು.

ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ 5 ವರ್ಷ ಅಧಿಕಾರ ಪೂರ್ಣಗೊಳಿಸುತ್ತಾರೋ ಅಥವಾ ಇಂದು ಎಲ್ಲರಿಗೂ ಧನ್ಯವಾದ ಹೇಳುವುದನ್ನು ನೋಡಿದರೆ ವಿದಾಯ ಹೇಳುತ್ತಿದ್ದಾರೆಯೋ ? ಎಂಬ ಸಂಶಯ ಬರುತ್ತದೆ ಎಂದರು.

ಯತ್ನಾಳ್‌ ಅವರಿಗೆ ಏನೇನೋ ಸಂಶಯವಿರುತ್ತದೆ. ಅದಕ್ಕೀ ಅವರನ್ನು ಪಕ್ಷದಿಂದ ಹೊರ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಛೇಡಿಸಿದರು. ಯತ್ನಾಳ್‌ ಧ್ವನಿಗೂಡಿಸಿ ನನ್ನನ್ನು ಹೊರ ಹಾಕಿದ್ದಾರೆ. ನಿಮನ್ನೂ ಹೊರ ಹಾಕಿದ್ದಾರೆ. ಆ ಬಗ್ಗೆ ಚರ್ಚೆ ಮಾಡುವುದೇ ಬೇಡ. ನಿಮನ್ನು ಕುತಂತ್ರದಿಂದ ಹೊರಹಾಕಿದ್ದರು. ಅದಕ್ಕೆ ನೀವು ಮುಖ್ಯಮಂತ್ರಿ ಆಗಿದ್ದೀರಾ. ರಾಜಕೀಯದಲ್ಲಿ ಇಂಥದ್ದೆಲ್ಲ ಇದ್ದೇ ಇರುತ್ತದೆ ಎಂದ ಹೇಳಿದರು.

ಯತ್ನಾಳ್‌ ಅವರಿಗೆ ಯಾವುದೇ ಸಂಶಯ ಬೇಡ ಎಂದು ಸಿದ್ದರಾಮಯ್ಯ ಹೇಳಿದಾಗ, ಹಾಗಿದ್ದರೆ ಸಿದ್ದರಾಂಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಸಂದೇಶ ಇಂದು ರವಾನೆಯಾದಂತಾಯಿತು ಎಂದು ಯತ್ನಾಳ್‌ ಹೇಳುವ ಮೂಲಕ ರಾಜಕೀಯ ಚರ್ಚೆಗೆ ತೆರೆ ಎಳೆದರು.ಅಧಿಕಾರ ಹಂಚಿಕೆಯ ಗೊಂದಲಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಹೇಳಿಕೆ ನಾನಾ ರೀತಿಯ ವ್ಯಾಖ್ಯಾನಗಳಿಗೂ ಕಾರಣವಾಗಿದೆ.

RELATED ARTICLES

Latest News