ಬೆಂಗಳೂರು, ಏ.2- ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ 4.10 ಕೋಟಿ ರೂ. ಪಡೆದುಕೊಂಡು ಸಿಎಂ, ರಾಜ್ಯಪಾಲರ ನಕಲಿ ಸಹಿ ಇರುವ ನಡಾವಳಿ ಪತ್ರವನ್ನು ನೀಡಿ ವಂಚಿಸಿದ್ದ ಏಳು ಮಂದಿಯ ಪೈಕಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಿಯಾಜ್ ಅಹಮ್ಮದ್ (41), ಯೂಸುಫ್ ಸುಬ್ಬೇಕಟ್ಟೆ (47), ಚಂದ್ರಪ್ಪ (44) ಮತ್ತು ರುದ್ರೇಶ್ (35) ಬಂತ ವಂಚಕರು. ಪ್ರಮುಖ ಆರೋಪಿ ರಿಯಾಜ್ ಎಂಬಾತ ತಮ್ಮ ಸ್ನೇಹಿತರಾದ ಯುಸೂಫ್, ಚೇತನ್ ಶಂಕರ್, ಚಂದ್ರಪ್ಪ, ಮಹೇಶ್, ರುದ್ರೇಶ ಮತ್ತು ಹರ್ಷವರ್ಧನ ರೊಂದಿಗೆ ಸೇರಿಕೊಂಡು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸದಸ್ಯತ್ವ ಕೊಡಿಸುವುದಾಗಿ ನೀಲಮ್ಮ ಎಂ ಬೆಳಮಗಿ(54) ಎಂಬುವವರಿಗೆ ನಂಬಿಸಿ ಅದಕ್ಕೆ 5ಕೋಟಿ ಕೊಡಬೇಕಾಗುವುದು ಎಂದು ಹೇಳಿದ್ದಾರೆ.
ಇವರ ಮಾತನ್ನು ನಂಬಿದ ನೀಲಮ್ಮ ಅವರು ಹಂತ ಹಂತವಾಗಿ ಒಟ್ಟು 4.10 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಹಾಗೂ ಬ್ಯಾಂಕ್ ಖಾತೆಯ ಮೂಲಕ ವರ್ಗಾವಣೆ ಮಾಡಿದ್ದಾರೆ.ಈ ವಂಚಕರು ಹಣವನ್ನು ಪಡೆದುಕೊಂಡು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಸಂಬಂಧ ಮುಖ್ಯಮಂತ್ರಿ ಟಿಪ್ಪಣಿ, ನಡಾವಳಿ, ನಕಲಿ ಸಹಿಗಳನ್ನು ಮಾಡಿ, ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯಪತ್ರವನ್ನು ಸೃಷ್ಟಿಸಿ ಮೋಸ ಮಾಡಿರುವುದು ನೀಲಮ್ಮ ಅವರಿಗೆ ಗೊತ್ತಾಗಿದೆ.
ತಕ್ಷಣ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಂಚಕರ ಜಾಲದ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ ಪ್ರಮುಖ ಆರೋಪಿ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ಉಳಿತ ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ. ಈ ಕಾರ್ಯಾಚರಣೆಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿ ಯಶಸ್ವಿಯಾಗಿ ಕೈಗೊಂಡಿರುತ್ತಾರೆ.