Homeರಾಷ್ಟ್ರೀಯವಿಸರ್ಜನೆಯ ವೇಳೆ ನೀರಿನಲ್ಲಿ ತೇಲುವ ದುರ್ಗಾ ಮೂರ್ತಿಗಳ ಫೋಟೋ, ವಿಡಿಯೋ ಹಂಚಿಕೊಳ್ಳದಂತೆ ನಿಷೇಧ

ವಿಸರ್ಜನೆಯ ವೇಳೆ ನೀರಿನಲ್ಲಿ ತೇಲುವ ದುರ್ಗಾ ಮೂರ್ತಿಗಳ ಫೋಟೋ, ವಿಡಿಯೋ ಹಂಚಿಕೊಳ್ಳದಂತೆ ನಿಷೇಧ

ಮುಂಬೈ, ಅ. 16 (ಪಿಟಿಐ)- ಇದೇ ತಿಂಗಳ 20ರಿಂದ 22ರವರೆಗೆ ದುರ್ಗಾದೇವಿಯ ವಿಗ್ರಹಗಳ ವಿಸರ್ಜನೆ ಸಂದರ್ಭದಲ್ಲಿ, ನೀರಿನಲ್ಲಿ ತೇಲುತ್ತಿರುವ ಅಥವಾ ಅರ್ಧ ಮುಳುಗಿರುವ ವಿಗ್ರಹಗಳ ಫೋಟೋ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸುವುದು ಮತ್ತು ಹಂಚಿಕೊಳ್ಳುವುದನ್ನು ನಿಷೇಧಿಸಿ ಮುಂಬೈ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಡೆಯಲು ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್ 163ರ ಅಡಿಯಲ್ಲಿ ಪೊಲೀಸ್ ಉಪ ಆಯುಕ್ತ (ಕಾರ್ಯಾಚರಣೆ) ಅಕ್ಬರ್ ಪಠಾಣ್ ಅವರು ಈ ಆದೇಶ ಹೊರಡಿಸಿದ್ದಾರೆ.

ಅಕ್ಟೋಬರ್ 20ರಿಂದ 22ರವರೆಗೆ ನಗರದ ವಿವಿಧ ಜಲಮೂಲಗಳಲ್ಲಿ ದುರ್ಗಾದೇವಿಯ ವಿಗ್ರಹಗಳನ್ನು ವಿಸರ್ಜಿಸಲಾಗುತ್ತದೆ. ಈ ಸಂದರ್ಭದಲ್ಲಿ ನೀರಿನ ಅಲೆಗಳ ರಭಸ ಅಥವಾ ಉಬ್ಬರವಿಳಿತದ ಕಾರಣದಿಂದ ಸಂಪೂರ್ಣವಾಗಿ ಮುಳುಗದ ಅಥವಾ ಅರ್ಧ ಮುಳುಗಿದ ವಿಗ್ರಹಗಳು ದಡಕ್ಕೆ ಬಂದು ತೇಲಬಹುದು. ಇಂತಹ ವಿಗ್ರಹಗಳನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸಿಬ್ಬಂದಿ ಸಂಗ್ರಹಿಸಿ, ಮತ್ತೆ ನೀರಿನಲ್ಲಿ ವಿಸರ್ಜಿಸುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಂಪೂರ್ಣವಾಗಿ ವಿಸರ್ಜನೆಯಾಗದ ಅಥವಾ ಅರ್ಧ ಮುಳುಗಿದ ವಿಗ್ರಹಗಳ ಫೋಟೋ ಹಾಗೂ ವಿಡಿಯೊಗಳನ್ನು, ಅವುಗಳನ್ನು ಸಂಗ್ರಹಿಸುತ್ತಿರುವ ಬಿಎಂಸಿ ಸಿಬ್ಬಂದಿಯ ದೃಶ್ಯಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು. ಇದರಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ, ಇಂತಹ ಘಟನೆಗಳನ್ನು ತಡೆಯಲು ತಕ್ಷಣವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವೆಂದು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

RELATED ARTICLES
spot_img

Latest News