Homeರಾಜ್ಯಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಭರದಿಂದ ಸಾಗಿದೆ ಸಿದ್ಧತೆ

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಭರದಿಂದ ಸಾಗಿದೆ ಸಿದ್ಧತೆ

ಮಡಿಕೇರಿ,ಅ.17- ಕನ್ನಡನಾಡಿನ ಜೀವನದಿ ಎಂದೇ ಹೆಸರುವಾಸಿಯಾಗಿರುವ ಪವಿತ್ರ ಕಾವೇರಿ ಮಾತೆಯ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತಲಕಾವೇರಿಯಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಪವಿತ್ರ ಕಾವೇರಿ ತೀರ್ಥರೂಪಿಣಿಯಾಗಿ ಕೊಡಗು ಜಿಲ್ಲೆಯ ಬ್ರಹಗಿರಿ ಬೆಟ್ಟದ ತಪ್ಪಲಿನಲ್ಲಿರುವ ತಲಕಾವೇರಿಯಲ್ಲಿ ಇಂದು ಸಂಜೆ 7.50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವವಾಗಲಿದೆ.

ಈ ಪುಣ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈಗಾಗಲೇ ತಲಕಾವೇರಿಗೆ ಆಗಮಿಸಿದ್ದು, ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ವಿವಿಧ ಅಲಂಕಾರ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಕುಡಿಯುವ ನೀರು, ವಿಶೇಷ ಬಸ್‌‍ ಸೌಲಭ್ಯ, ಪಾರ್ಕಿಂಗ್‌, ಆಸನದ ವ್ಯವಸ್ಥೆ ಸೇರಿದಂತೆ ಮತ್ತಿತರ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ.

ಕಾವೇರಿ ಕುಂಡಿಕೆಯ ಬಳಿ ಒಂಭತ್ತು ಅರ್ಚಕರು ವಿವಿಧ ಪೂಜಾ ಕೈಂಕರ್ಯಗಳನ್ನು ಮುಂಜಾನೆಯಿಂದಲೇ ನೆರವೇರಿಸಿದ್ದು, ಸಂಜೆಯ ಕಾರ್ಯಕ್ರಮಕ್ಕೆ ತಲಕಾವೇರಿಯ ಬ್ರಹ ಕುಂಡಿಕೆ, ಅಗಸ್ತ್ಯೇಶ್ವರ ಹಾಗೂ ಭಾಗಮಂಡಲದ ದೇವಾಲಯದಲ್ಲೂ ಸಹ ಸಿದ್ಧತೆಗಳನ್ನು ಮಾಡಿಕೊಂಡಿದ್ದು ವಿದ್ಯುತ್‌ ದೀಪಲಂಕಾರ ಹಾಗೂ ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಲಾಗಿದೆ.

ತೀರ್ಥೋದ್ಭವದ ನಂತರ ಭಕ್ತರಿಗೆ ತೀರ್ಥ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ ವೇಳೆಯಲ್ಲೂ ಸಹ ಅನುಕೂಲವಾಗುವಂತೆ ಹಾಗೂ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಬೃಹತ್‌ ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ.ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಪವಿತ್ರ ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

RELATED ARTICLES
spot_img

Latest News