ಬೆಂಗಳೂರು,ಡಿ.20- ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಜಾರಿ ಮಾಡುವ ಮೂಲಕ ಕಾಂಗ್ರೆಸ್ ನಾಯಕರು ಓಲೈಕೆಗೆ ಮುಂದಾಗಿದ್ದಾರೆ. ನಮ್ಮ ಬಾಯಿಗೆ ಬೀಗ ಹಾಕಲು ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ನೀವು ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರಿ ನೋಡೋಣ ಹಾಕಿಬಿಡಿ. ಈ ಕಾಯ್ದೆ ಮೂಲಕ ವಾಕ್ ಸ್ವಾತಂತ್ರ್ಯವನ್ನು ದಮನ ಮಾಡಲು ಸರ್ಕಾರ ಹೊರಟಿದೆ. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕೆಲವರ ಬಾಯಿ ಮುಚ್ಚಿಸಬಹುದೆಂಬ ಭ್ರಮೆ ಬೇಡ ಎಂದು ವಾಗ್ದಾಳಿ ನಡೆಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್‌ನವರು ಅಂಬೇಡ್ಕರ್ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ. ಸುಪ್ರೀಂಕೋರ್ಟ್ ಈ ಹಿಂದೆ ಕೇಶವನಂದಿ ಕೇಸ್ ನಲ್ಲಿ ಬಹಳ ಸ್ಪಷ್ಟವಾಗಿ ಹೇಳಿದೆ. ನ್ಯಾಯಾಂಗ ಮಾಡಬೇಕಾದ ಕೆಲಸವನ್ನು ಕಾರ್ಯಾಂಗ ಮಾಡಲು ಹೊರಟಿದೆ. ಈ ವಿಧೇಯಕದ ಆಧಾರದ ಮೇಲೆ ನಾಳೆ ಯಾರೋ ಮಾತನಾಡಬಹುದು ಎಂದು ಅನ್ನಿಸಿದರೆ ಅವರನ್ನು ಮೊದಲ ದಿನವೇ ಬಂಧನ ಮಾಡಬಹುದು ಎಂದರು.
ಈ ವಿಧೇಯಕದ ಮೂಲಕ ಒಬ್ಬ ಎಸ್‌ಪಿ ಅಥವಾ ಡಿಸಿ ನಮ ಮೇಲೆ ಕೇಸ್ ಹಾಕಿ ಹತ್ತು ವರ್ಷ ಶಿಕ್ಷೆ ನೀಡಬಹುದು. ನಾಳೆ ನಾನೇ ಎಸ್ ಪಿ, ಡಿಸಿಗೆ ಬೈದರೆ ಅವರು ನಮಗೆ ಹತ್ತು ವರ್ಷ ಶಿಕ್ಷೆ ನೀಡಬಹುದು. ನಾವು ಆಗ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ. ಈ ಕಾಯ್ದೆ ಬಂದ ಮೇಲೆ ಕಾಂಗ್ರೆಸ್ ಮೇಲೆ ನಾನೂ ಮಾತಾಡುವಂತಿಲ್ಲ. ನಾಳೆ ಕನ್ನಡಪರ ಹೋರಾಟಗಾರರು ಮಾತಾಡುವಂತಿಲ್ಲ. ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ ಎಂದು ದೂರಿದರು.
ಯಾಕೆ ಅಧಿಕಾರ ಕೊಟ್ಟಿದ್ದು? ನಿಮಗೆ ಸ್ವಂತ ತಾಕತ್ತಿಲ್ಲದೇ ರಾಜಕೀಯದಲ್ಲಿರುವ ಪ್ರಿಯಾಂಕ್ ಖರ್ಗೆ ಇದನ್ನೆಲ್ಲಾ ಮಾಡುತ್ತಿದ್ದಾರೆ. ಇವರಿಗೆ ಜನರನ್ನು ಎದುರಿಸಲು ಆಗುತ್ತಿಲ್ಲ. ರೈತರು, ಮಹಿಳೆಯರು, ಸಾರ್ವಜನಿಕರು, ಅಪಾರ್ಟ್‌ಮೆಂಟ್ ನಿವಾಸಿಗಳು ವಿರೋಧ ಮಾಡಿದರು. ಅವರನ್ನು ಎದುರಿಸಲು ಆಗುತ್ತಿಲ್ಲ. ಅದಕ್ಕೆ ಈ ವಿಧೇಯಕ ತಂದಿದ್ದಾರೆ.
ಇವರು ಕುರ್ಚಿ ಆಟದಲ್ಲೇ ಮುಳುಗಿದ್ದಾರೆ. ಮ್ಯೂಸಿಕನ್ ಚೇರ್ ಆಟ ಅಷ್ಟೇ ನಡೆಯುತ್ತಿದೆ. ಕೃಷ್ಣ ಭೈರೇಗೌಡ ಭೂಮಿಯನ್ನು ನುಂಗಿದ್ದಾರೆ. ನೀವು ಕಂದಾಯ ಸಚಿವರಾದ ಮೇಲೆ ಯಾಕೆ ದಾಖಲೆ ಸೃಷ್ಟಿ ಆಯಿತು? ಇವರ ಬಗ್ಗೆ ನಾವು ಮಾತಾಡಬಾರದು ಎಂದು ವಿಧೇಯಕ ತಂದಿದ್ದಾರೆ ಎಂದು ಟೀಕಿಸಿದು.
ಈ ವಿಧೇಯಕವನ್ನು ಅಂಗೀಕರಿಸದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಪತ್ರ ಬರೆಯಲಾಗಿದೆ. ಇದೇ ರೀತಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ. ಈ ವಿಧೇಯಕದಿಂದ ಸಮಾಜದಲ್ಲಿ ಮತ್ತಷ್ಟು ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆ ಗುಜರಾತ್ ಸಿಎಂ ಆಗಿದ್ದ ಪ್ರಧಾನಿ ನರೇಂದ್ರಮೋದಿ ಅವರನ್ನು ಮೌತ್ ಕಾ ಸೌದಾಗರ್(ಸಾವಿನ ವ್ಯಾಪಾರಿ) ಎಂದು ಹೇಳಿದವರು ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ಹೊಡೆದ ಪ್ರಕರಣವನ್ನು ರದ್ದು ಮಾಡಿದವರ ಮೇಲೆ ಯಾವ ನಿಯಮದಡಿ ದೂರು ದಾಖಲಿಸುತ್ತೀರಿ ಎಂದು ಪ್ರಶ್ನೆ ಮಾಡಿದರು.
ಹೈಕಮಾಂಡ್‌ನ್ನು ಮೆಚ್ಚಿಸಲು ಈ ಕಾಯ್ದೆ ಜಾರಿಗೆ ತಂದಿರಬಹುದು. ಕರ್ನಾಟಕದಲ್ಲಿ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಸರ್ಕಾರ ಹೊರಟಿದೆ. ಇದಕ್ಕೆ ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು.
ರಾಜ್ಯ ಸರ್ಕಾರ ಫ್ಯಾಕ್ಟ್ ಚೆಕ್ ಏಜೆನ್ಸಿಯನ್ನು ರಚನೆ ಮಾಡಿದೆ. ಅದರಲ್ಲಿರುವ ಸದಸ್ಯರು ಖಾಸಗಿ ವ್ಯಕ್ತಿಗಳು. ಫ್ಯಾಕ್ಟ್ ಚೆಕ್ ಏಜೆನ್ಸಿಗೆ ಪ್ರಿಯಾಂಕ್ ಖರ್ಗೆಗೆ ನೇತೃತ್ವ ವಹಿಸಿದ್ದಾರೆ. ಗೋವಿಂದ್ ರೆಡ್ಡಿ, ಕಿರಣ್, ಗುರುಪ್ರಸಾದ್, ಪುನೀತ್, ಸಾಗರಿಕಾ ಇವರೆಲ್ಲಾ ಇದರ ಸದಸ್ಯರಾಗಿದ್ದಾರೆ ಎಂದು ಕಿಡಿಕಾರಿದರು.
ಇವರು ಎಂ ಎಲ್ ಎ, ಎಂಲ್ ಸಿ ಮೇಲೆ ಕೇಸ್ ಹಾಕಿದ್ದಾರೆ. ಕೇಸ್ ಹಾಕಿದವರು ಫ್ಯಾಕ್ಟ್ ಚೆಕ್ ಸಮಿತಿ ಸದಸ್ಯರು ಕೊಡುವ ಮಾಹಿತಿ ಮೇಲೆ ಕೇಸ್ ಹಾಕುತ್ತಾರೆ. ಕಾಂಗ್ರೆಸ್ ಚೇಲಾಗಳಿಗೆ ಇವರು ಕೆಲಸ ನೀಡಿದ್ದಾರೆ. ಅವರು ಬಿಜೆಪಿ ಮೇಲೆ ದೂರು ದಾಖಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫ್ಯಾಕ್ಟ್ ಚೆಕ್‌ಗೆ ಯಾರ ಅಪ್ಪನ ದುಡ್ಡು ಕೊಡುತ್ತೀರಿ? ಮೊದಲು ಫ್ಯಾಕ್ಟ್ ಚೆಕ್ ಬಂದ್ ಮಾಡಿ. ಪ್ರಿಯಾಂಕ್ ಖರ್ಗೆ ಅಪ್ಪನ ಹಿಂದೆ ನಿಂತುಕೊಂಡು ಇದನ್ನೆಲ್ಲಾ ಮಾಡುತ್ತಾ ಇದ್ದಾರೆ. ಪ್ರಿಯಾಂಕ್ ಅವರ ಸ್ವಂತ ಏನೇನೂ ಇಲ್ಲ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್. ಹರೀಶ್ ಮತ್ತಿತರರು ಇದ್ದರು.
