ಕೋಟಾ, ಅ. 17 (ಪಿಟಿಐ): ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸುಮಾರು 6 ಗಂಟೆಗೆ ದೆಹಲಿ–ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಸುಮಾರು 23 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯ ಪಕ್ಕದಲ್ಲಿದ್ದ 15 ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರ ಪೈಕಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ. ಎಕ್ಸ್ಪ್ರೆಸ್ವೇಯ 384ನೇ ಕಂಬದ ಬಳಿ ಈ ಅಪಘಾತ ಸಂಭವಿಸಿದೆ. ವಾಹನ ಚಲಾಯಿಸುತ್ತಿದ್ದಾಗ ಚಾಲಕನಿಗೆ ನಿದ್ದೆ ಬಂದಿರಬಹುದು ಅಥವಾ ತೂಕಡಿಕೆ ಉಂಟಾಗಿರಬಹುದು. ಇದರಿಂದಾಗಿ ಎಂಟು ಪಥಗಳ ರಸ್ತೆಯಲ್ಲಿ ವಾಹನ ನಿಯಂತ್ರಣ ತಪ್ಪಿ ಪಕ್ಕಕ್ಕೆ ಸರಿದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಘಟನೆ ನಡೆದ ಕೂಡಲೇ ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಚರಂಡಿಯಲ್ಲಿದ್ದ ಕೆಸರು ಮತ್ತು ನೀರು ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟುಮಾಡಿದ ಹಿನ್ನೆಲೆಯಲ್ಲಿ, ಕ್ರೇನ್ಗಳನ್ನು ಬಳಸಿ ಜಖಂಗೊಂಡ ವಾಹನವನ್ನು ಹೊರತೆಗೆಯಲಾಯಿತು ಮತ್ತು ಅದರೊಳಗೆ ಸಿಲುಕಿದ್ದವರನ್ನು ರಕ್ಷಿಸಲಾಯಿತು.
ಮಧ್ಯಪ್ರದೇಶದ ಭೋಪಾಲ್ ಮತ್ತು ಬೆತುಲ್ ಜಿಲ್ಲೆಗಳಿಗೆ ಸೇರಿದ ಒಂದೇ ಕುಟುಂಬದ ಸಂಬಂಧಿಕರು ಇದರಲ್ಲಿ ಪ್ರಯಾಣಿಸುತ್ತಿದ್ದರು ಎಂದು ಕೋಟಾ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸುಜೀತ್ ಶಂಕರ್ ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ನಾಲ್ಕರಿಂದ ಐದು ದಿನಗಳ ತೀರ್ಥಯಾತ್ರೆ ಕೈಗೊಳ್ಳಲು ಅವರು ನಿನ್ನೆ ಸಂಜೆ ಭೋಪಾಲ್ನಿಂದ ಪ್ರಯಾಣ ಆರಂಭಿಸಿದ್ದರು ಎಂದು ಅವರು ಹೇಳಿದರು.
ಗಾಯಗೊಂಡ ಪ್ರಯಾಣಿಕರಲ್ಲೊಬ್ಬರಾದ ಅಂಶಿಕಾ ಅವರು, ತಾವು ಚಿಕ್ಕಪ್ಪಂದಿರು, ಅತ್ತೆಯಂದಿರು ಮತ್ತು ಇತರ ಸಂಬಂಧಿಕರೊಂದಿಗೆ ಪ್ರಯಾಣಿಸುತ್ತಿದ್ದುದಾಗಿ ತಿಳಿಸಿದರು. ಸಂಜೆ 7 ಗಂಟೆಗೆ ಭೋಪಾಲ್ನಿಂದ ಹೊರಟಿದ್ದ ತಾವು ಖಾತು ಶ್ಯಾಮ್ಜಿ ದೇವಾಲಯಕ್ಕೆ ದರ್ಶನಕ್ಕಾಗಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು. ವಾಹನದಲ್ಲಿ ಸುಮಾರು 23 ಪ್ರಯಾಣಿಕರಿದ್ದರು. ಅಪಘಾತ ಸಂಭವಿಸಿದಾಗ ಅವರಲ್ಲಿ ಬಹುತೇಕರು ನಿದ್ರಿಸುತ್ತಿದ್ದರು ಎಂದು ಅಂಶಿಕಾ ತಿಳಿಸಿದರು. ಚಾಲಕನಿಗೆ ನಿದ್ದೆ ಬಂದಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಗಾಯಗೊಂಡವರನ್ನು ತಕ್ಷಣವೇ ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಎಂಬಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಎನ್ಎಂಸಿಎಚ್ ಪ್ರಾಂಶುಪಾಲ ಡಾ. ನಿಲೇಶ್ ಜೈನ್ ಮಾತನಾಡಿ, ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸೆ ಆರಂಭಿಸಲಾಗಿದ್ದು, ಸಿಟಿ ಸ್ಕ್ಯಾನ್ನಂತಹ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಎನ್ಎಂಸಿಎಚ್ನ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಅಶುತೋಷ್ ಶರ್ಮಾ ಅವರು, ತಮ್ಮ ಆಸ್ಪತ್ರೆಗೆ 15 ರೋಗಿಗಳನ್ನು ಕರೆತರಲಾಗಿದೆ ಎಂದು ದೃಢಪಡಿಸಿದರು. ಇವರಲ್ಲಿ ಏಳು ಮಂದಿ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು. ಗಾಯಗೊಂಡಿದ್ದ ಉಳಿದ ಎಂಟು ಮಂದಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಆರೋಗ್ಯ ಸ್ಥಿರಗೊಳಿಸಿದ ಬಳಿಕ ಸಮಗ್ರ ವೈದ್ಯಕೀಯ ಆರೈಕೆ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ದುರ್ಘಟನೆಯಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಉಳಿದ ಪ್ರಯಾಣಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಪಿ ಸುಜೀತ್ ಶಂಕರ್ ತಿಳಿಸಿದರು. ಅಧಿಕಾರಿಗಳು ಸ್ಥಳವನ್ನು ತೆರವುಗೊಳಿಸುವ ಕಾರ್ಯವನ್ನು ಮುಂದುವರಿಸಿದ್ದು, ಪ್ರಯಾಣಿಕರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
