ಬೆಂಗಳೂರು, ಏ.4- ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಲೆ ಇದ್ದು, ಎಲ್ಲೆಡೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ದಾಹ ತಣಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಈ ಮಧ್ಯೆ ದೇಹ ತಂಪಾಗಿಸುವ ನೈಸರ್ಗಿಕ ಪಾನೀಯ ಎಳನೀರು ಬೇಲೆ ಗಗನಕ್ಕೇರುತ್ತಿದೆ.
ಈ ಬಿಸಿಲಿನಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದೇ ಪ್ರತಿಯೊಬ್ಬರಿಗೂ ಸವಾಲಾಗಿದ್ದು, ಎಷ್ಟು ನೀರು ಕುಡಿದರೂ ಸಾಕಾಗುವುದಿಲ್ಲ. ಹಾಗಾಗಿ ಕೆಲವರು ಆರೋಗ್ಯದ ದೃಷ್ಟಿಯಿಂದ ಎಳನೀರು ಕುಡಿಯುತ್ತಾರೆ. ಇದು ದೇಹಕ್ಕೆ ಒಂದು ರೀತಿಯಲ್ಲಿ ಎನರ್ಜಿ ಡ್ರಿಂಕ್ ಆಗಿ ಕೆಲಸ ಮಾಡುತ್ತದೆ. ದೇಹದಲ್ಲಿ ಎಷ್ಟೇ ಉಷ್ಣಾಂಶವಿದ್ದರೂ ತಂಪು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಜನರು ಎಳನೀರು ಮೊರೆ ಹೋಗುತ್ತಿದ್ದಾರೆ.
ಆದರೆ ಬೆಲೆ ಮಾತ್ರ ಬಿಸಿಲಿನಂತೆ ಏರುತ್ತಲೇ ಇದೆ. ಈ ಹಿಂದೆ ನಗರದ ಪ್ರಮುಖ ಕಡೆ, ರಸ್ತೆ ಬದಿ, ಅಂಗಡಿ ಮುಂಭಾಗ ಎಳನೀರು ಮಾರಾಟ ಜೋರಾಗಿ ನಡೆಯುತ್ತಿತ್ತು. ಈಗ ಆ ಅಂಗಡಿಗಳು ಮಾಯವಾಗಿಬಿಟ್ಟಿವೆ. ಗ್ರಾಹಕರು ಹುಡುಕಾಡುವಂತಹ ಸ್ಥಿತಿ ನಿರ್ಮಾಣ ವಾಗಿಬಿಟ್ಟಿದೆ.
ಏಕೆಂದರೆ ಎಳನೀರು ಸಿಗುತ್ತಿಲ್ಲ. ಸಾಮಾನ್ಯವಾಗಿ ಬೆಂಗಳೂರಿಗೆ ಮಂಡ್ಯ, ಮದ್ದೂರು, ತುಮಕೂರು, ಹಾಸನ ಭಾಗದಿಂದ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಬರುತ್ತಿತ್ತು. ಆದರೆ, ಕೆಲ ದಿನಗಳಿಂದ ಪೂರೈಕೆ ಕಡಿಮೆಯಾಗಿದ್ದು, ವ್ಯಾಪಾರಿಗಳಿಗೆ ತೊಂದರೆಯಾಗಿದೆ.
ಮಳೆಯಿಲ್ಲದೆ ತೆಂಗಿನ ಮರಗಳೂ ಕೂಡ ಒಣಗುತ್ತಿದ್ದು, ರೈತರು ಎಳನೀರು ಇಳಿಸುವುದನ್ನು ಕಡಿಮೆ ಮಾಡಿದ್ದಾರೆ. ಹಾಗಾಗಿ ಪೂರೈಕೆಯಲ್ಲಿ ಕುಂಠಿತವಾಗಿದ್ದು, ಅಲ್ಲೊಂದು ಇಲ್ಲೊಂದು ಎಳನೀರು ಮಾರುವವರು ಕಾಣಿಸುತ್ತಾರೆ. ಬೆಲೆ ನೋಡಿದರೆ ತಲೆ ತಿರುಗೋದಂತೂ ಗ್ಯಾರಂಟಿ.
ಸಾಮಾನ್ಯ ದಿನಗಳಲ್ಲಿ ಒಂದು ಎಳನೀರು ಹೆಚ್ಚು ಎಂದರೂ 30 ರೂ.ಗೆ ಮಾರಾಟವಾಗುತ್ತಿತ್ತು . ಇಂದು 50 ರೂ.ಗೆ ತಲುಪಿದೆ. ವ್ಯಾಪಾರಿಗಳು ಸ್ಲೇಟ್‍ಗಳಲ್ಲಿ ಬೆಲೆ ಬರೆದು ನೇತು ಹಾಕಿದ್ದು, ಇದನ್ನು ನೋಡಿದ ಗ್ರಾಹಕರು ಕುಡಿಯದೆ ವಾಪಸ್ ಬಂದು ನೀರು ಕುಡಿಯುತ್ತಿದ್ದಾರೆ.
ನಾವು ಮದ್ದೂರು ಕಡೆಯಿಂದ ಎಳನೀರು ತರಿಸುತ್ತಿದ್ದವು. ಪ್ರತಿ ದಿನ ಎಳನೀರು ಹೊತ್ತು ಬರುತ್ತಿದ್ದ ಟೆಂಪೋ ಮಾಲು ಇಲ್ಲದೆ ವಾರವಾದರೂ ಬರುತ್ತಿಲ್ಲ. ಸರಬರಾಜು ಕಡಿಮೆಯಾಗಿದೆ, ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಜ್ಞಾನಭಾರತಿ ವ್ಯಾಪ್ತಿಯ ಎಳನೀರು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.