Homeಅಂತಾರಾಷ್ಟ್ರೀಯಫ್ರಾನ್ಸ್ ಧಗಧಗ : ಸರ್ಕಾರೀ ಕಚೇರಿಗಳಿಗೆ ಬೆಂಕಿ, ಅಂಗಡಿಗಳನ್ನು ಲೂಟಿ ಮಾಡಿದ ಪ್ರತಿಭಟನಾಕಾರರು

ಫ್ರಾನ್ಸ್ ಧಗಧಗ : ಸರ್ಕಾರೀ ಕಚೇರಿಗಳಿಗೆ ಬೆಂಕಿ, ಅಂಗಡಿಗಳನ್ನು ಲೂಟಿ ಮಾಡಿದ ಪ್ರತಿಭಟನಾಕಾರರು

ಪ್ಯಾರಿಸ್‌, ಅ.18- ಫ್ರಾನ್ಸ್‌ನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ಹದಗೆಡುತ್ತಿರುವ ಸಾರ್ವಜನಿಕ ಸೇವೆಗಳ ವಿರುದ್ಧ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿವೆ.ದೇಶಾದ್ಯಂತ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಂಗಡಿಗಳಲ್ಲಿ ದರೋಡೆ ನಡೆಸಲಾಗಿದೆ. ಪ್ರತಿಭಟನಾಕಾರರು ಮತ್ತು ಗಲಭೆ ನಿಯಂತ್ರಣ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 150 ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದು, ಈ ನಡುವೆ 1,200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಪ್ಯಾರಿಸ್‌ ಸೇರಿದಂತೆ ಫ್ರಾನ್ಸ್‌ನ ಹಲವು ನಗರಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ರಾಜಧಾನಿಯಲ್ಲಿ ಅಶ್ರುವಾಯುವಿನ ಹೊಗೆ ಆವರಿಸಿದ್ದರೆ, ಹಲವು ನಗರಗಳಲ್ಲಿ ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಅಂಗಡಿಗಳನ್ನು ಧ್ವಂಸಗೊಳಿಸಿ, ವಸ್ತುಗಳನ್ನು ದೋಚಲಾಗಿದೆ.

ದೇಶಾದ್ಯಂತ ಸುಮಾರು 5.5 ಲಕ್ಷ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಪ್ಯಾರಿಸ್‌ನಲ್ಲೇ 1.1 ಲಕ್ಷ ಜನರು ಸೇರಿದ್ದರು ಎಂದು ಫ್ರಾನ್ಸ್‌ನ ಆಂತರಿಕ ಸಚಿವ ಲಾರೆಂಟ್‌ ನುನೆಜ್‌ ತಿಳಿಸಿದ್ದಾರೆ. ಆದರೆ, ಪ್ರತಿಭಟನೆಯ ಆಯೋಜಕರು ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು ಎಂದು ಹೇಳಿದ್ದಾರೆ.

ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದ ಹಿನ್ನೆಲೆಯಲ್ಲಿ 1,200ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಘರ್ಷಣೆಯಲ್ಲಿ 150 ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪ್ರಧಾನಿ ಸೆಬಾಸ್ಟಿಯನ್‌ ಲೆಕೊರ್ನು ತಿಳಿಸಿದ್ದಾರೆ.

ಶಾಲೆಗಳಲ್ಲಿನ ಹದಗೆಡುತ್ತಿರುವ ಪರಿಸ್ಥಿತಿಯ ವಿರುದ್ಧ ವಿದ್ಯಾರ್ಥಿಗಳು ಆರಂಭಿಸಿದ್ದ ಪ್ರತಿಭಟನೆ ಕ್ರಮೇಣ ವ್ಯಾಪಕ ಚಳವಳಿಯಾಗಿ ರೂಪುಗೊಂಡಿದೆ. ಆರ್ಥಿಕ ಸಂಕಷ್ಟ, ಸಾರ್ವಜನಿಕ ಸೇವೆಗಳ ಕುಸಿತ ಹಾಗೂ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಅಸಮಾಧಾನ ಹೊಂದಿರುವ ಕಾರ್ಮಿಕ ಸಂಘಟನೆಗಳು ಮತ್ತು ವಿವಿಧ ಗುಂಪುಗಳು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.
ಪ್ಯಾರಿಸ್‌ನಲ್ಲಿ ಮಧ್ಯಾಹ್ನ ನಡೆದ ಪ್ರಮುಖ ಮೆರವಣಿಗೆ ಬಹುತೇಕ ಶಾಂತಿಯುತವಾಗಿತ್ತು. ಆದರೆ, ಸಂಜೆ ಸಮೀಪಿಸುತ್ತಿದ್ದಂತೆ ಪರಿಸ್ಥಿತಿ ಹದಗೆಟ್ಟಿತು.

ಪ್ರತಿಭಟನಾಕಾರರ ಗುಂಪುಗಳು ರಸ್ತೆಗಳಲ್ಲಿ ಬೆಂಕಿ ಹಚ್ಚಿದವು. ಪ್ಲಾಸ್‌ ದೆ ಲಾ ರೆಪುಬ್ಲಿಕ್‌ ಸೇರಿದಂತೆ ಪ್ರಮುಖ ಸ್ಥಳಗಳ ಸಮೀಪ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಬಳಿಕ ಪ್ರತಿಭಟನಾಕಾರರು ಮತ್ತು ಗಲಭೆ ನಿಯಂತ್ರಣ ಪೊಲೀಸರ ನಡುವೆ ಘರ್ಷಣೆ ನಡೆಯಿತು.

ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಬಳಸಿದರು. ಪೊಲೀಸರು ಪ್ರತಿಭಟನಾಕಾರರ ಗುಂಪಿನತ್ತ ನುಗ್ಗಿ, ಹಲವರ ಮೇಲೆ ಲಾಠಿ ಪ್ರಹಾರ ನಡೆಸುತ್ತಿರುವ ದೃಶ್ಯಗಳು ಕೂಡ ಕಂಡುಬಂದಿವೆ.ಅನೇಕ ಅಂಗಡಿಗಳಲ್ಲಿ ದರೋಡೆ ನಡೆಸಲಾಗಿದ್ದು, ವ್ಯಾಪಾರ ಮಳಿಗೆಗಳನ್ನು ಧ್ವಂಸಗೊಳಿಸಲಾಗಿದೆ. ಕನಿಷ್ಠ ಒಂದು ರೆಸ್ಟೋರೆಂಟ್‌ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಬೆಂಕಿ ಉರಿಯುತ್ತಿದ್ದಾಗ ಪ್ರತಿಭಟನಾಕಾರರು ಐತಿಹಾಸಿಕ ಪ್ರತಿಮೆಗಳ ಮೇಲೆ ಹತ್ತಿರುವ ಛಾಯಾಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಪ್ರತಿಭಟನೆಗಳು ಎಷ್ಟು ವ್ಯಾಪಕವಾಗಿ ಹಿಂಸಾತ್ಮಕ ರೂಪ ಪಡೆದಿದ್ದವು ಎಂಬುದಕ್ಕೆ ಈ ದೃಶ್ಯಗಳು ಸಾಕ್ಷಿಯಾಗಿವೆ.

ಹಿಂಸಾಚಾರ ರಾಜಧಾನಿ ಪ್ಯಾರಿಸ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ಲಿಯಾನ್‌ ನಗರದಲ್ಲಿನ ಪ್ರವಾಸೋದ್ಯಮ ಕಚೇರಿಗೂ ಬೆಂಕಿ ತಗುಲಿತು.ಈ ಘಟನೆಯನ್ನು ನಗರದ ಮೇಯರ್‌ ಗ್ರೆಗೊರಿ ಡೌಸೆಟ್‌ ದುರಂತ ಎಂದು ಬಣ್ಣಿಸಿದ್ದಾರೆ. ಲಿಮೋಜ್‌ ನಗರದ ಪುರಭವನದಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಿಂದ ಕಟ್ಟಡದ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

ಗ್ರೆನೋಬಲ್‌, ಅವಿಗ್ನಾನ್‌, ಪೌ, ಮಾಂಟ್‌ಪೆಲಿಯರ್‌ ಮತ್ತು ವಾಲೆನ್ಸ್‌ ನಗರಗಳಲ್ಲಿಯೂ ಕಟ್ಟಡಗಳಿಗೆ ಹಾನಿಯಾಗಿರುವ ವರದಿಗಳು ಬಂದಿವೆ.ಜೀವನ ವೆಚ್ಚದ ಏರಿಕೆ, ಸಾರ್ವಜನಿಕ ಸೇವೆಗಳ ಕುಸಿತ ಮತ್ತು ಆರ್ಥಿಕ ಸಂಕಷ್ಟದ ವಿರುದ್ಧ ಆರಂಭವಾದ ಪ್ರತಿಭಟನೆಗಳು ಫ್ರಾನ್ಸ್‌ನ ಹಲವು ನಗರಗಳಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

RELATED ARTICLES
spot_img

Latest News