Monday, November 25, 2024
Homeರಾಜ್ಯ20 ಗಂಟೆ ಕಾರ್ಯಾಚರಣೆ ಯಶಸ್ವಿ, ಕೊಳವೆ ಬಾವಿಯಿಂದ ಬದುಕಿ ಬಂದ ಸಾತ್ವಿಕ್

20 ಗಂಟೆ ಕಾರ್ಯಾಚರಣೆ ಯಶಸ್ವಿ, ಕೊಳವೆ ಬಾವಿಯಿಂದ ಬದುಕಿ ಬಂದ ಸಾತ್ವಿಕ್

ಬೆಂಗಳೂರು, ಏ.4- ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕ ಸಾತ್ವಿಕನ ರಕ್ಷಣೆಗಾಗಿ ಅಹೋರಾತ್ರಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಬಾಲಕನನ್ನು ರಕ್ಷಿಸಿ ಹೊರತೆಗೆಯುವಲ್ಲಿ ಪೊಲೀಸರು ಅಗ್ನಿ ಶಾಮಕ ದಳ, SDRF,NDRF ಪಡೆ ನಡೆಸಿದ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿಯಾಗಿದೆ.

ಕೊಳವೆ ಬಾವಿಯಿಂದ ಹೊರತೆಗೆದ ಬಾಲಕ ಸಾತ್ವಿಕನನ್ನು ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.20 ಅಡಿಗಳ ಆಳಕ್ಕೆ ಬಿದ್ದಿದ್ದ ತಲೆ ಕೆಳಗಾಗಿ ಬಿದ್ದಿದ್ದ ಬಾಲಕನನ್ನು ಹೊರತೆಗೆಯುವಲ್ಲಿ ರಕ್ಷಣಾ ತಂಡ ನಡೆಸಿದ್ದ ಕಾರ್ಯಾಚರಣೆ ರೋಚಕವಾಗಿತ್ತು.ಲಚ್ಯಾಣ ಗ್ರಾಮದ ಸತೀಶ್ ಮುಜುಗೊಂಡ ಎಂಬುವವರ ಪುತ್ರ ಸಾತ್ವಿಕ್ (2) ನಿನ್ನೆ ಸಂಜೆ 4.45ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದು, 5.30ರಿಂದ ಬಾಲಕನ ರಕ್ಷಣೆಗಾಗಿ ಕಾರ್ಯಾಚರಣೆ ಆರಂಭವಾಗಿತ್ತು.

ಹೈದರಾಬಾದ್‍ನಿಂದ ನಿನ್ನೆ ರಾತ್ರಿ ಆಗಮಿಸಿದ್ದ ಎನ್‍ಡಿಆರ್‍ಎಫ್ ತಂಡ ಸ್ಥಳದಲ್ಲಿ ಬೀಡು ಬಿಟ್ಟು ಬಾಲಕನ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಸ್ಥಳೀಯ ಅಗ್ನಿಶಾಮಕ ದಳ ಹಾಗೂ ಪೊಲೀಸರು ಜೊತೆಗೂಡಿ ರಕ್ಷಣಾ ಕಾರ್ಯಾಚರಣೆಯನ್ನು ವೇಗವಾಗಿ ನಡೆಸಿದರು. ಕೊಳವೆ ಬಾವಿ ಪಕ್ಕದಲ್ಲಿ ಎರಡು ಜೆಸಿಬಿಗಳನ್ನು ಬಳಿಸಿ ಎರಡು ಗುಂಡಿಯನ್ನು ತೆಗೆದು ಮಗು ಇರುವ ಸ್ಥಳದ ಸಮೀಪಕ್ಕೆ ತಲುಪಲಾಯಿತು.

ಪೈಪ್ ಮೂಲಕ ಮಗುವಿಗೆ ಆಮ್ಲಜನಕ ಒದಿಗಿಸಲಾಗುತ್ತಿತ್ತು. ಕ್ಯಾಮೆರಾದಲ್ಲಿ ಬಾಲಕ ಸಾತ್ವಿಕ್‍ನ ಕಾಲು ಅಲುಗಾಡುತ್ತಿರುವ ದೃಶ್ಯ ಕಂಡುಬಂದ ಹಿನ್ನೆಲೆಯಲ್ಲಿ ಪೋಷಕರು, ನೆರೆದಿದ್ದ ಸಾವಿರಾರು ಜನ ಮಗು ಬದುಕಿದೆ, ಇನ್ನೇನು ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗುತ್ತದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ರಕ್ಷಣಾ ಕಾರ್ಯಾಚರಣೆಗೆ ಗಟ್ಟಿ ಕಲ್ಲು ಅಡ್ಡಿಯಾಗಿತ್ತು.

ಸ್ಟೋನ್ ಬ್ರೇಕರ್ ಬಳಸಿ ಬಂಡೆ ಒಡೆದು ಮಗುವಿನ ಬಳಿ ತಲುಪಿದ ರಕ್ಷಣಾ ಪಡೆ ಪೈಪ್‍ನಲ್ಲಿ ಸಿಲುಕಿದ್ದ ಮಗುವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾಕಾರಿ ಟಿ. ಬುಬಾಲನ್, ಎಸ್ಪಿ ಋಷಿಕೇಶ್ ಸೋನಾವಣೆ, ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದರು.

RELATED ARTICLES

Latest News