ಚಿಕ್ಕಮಗಳೂರು, ಅ.19: ದಸರಾ ರಜೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯಗಳಿಂದ ಕಾಫಿ ನಾಡಿನ ಪ್ರಸಿದ್ಧ ಪ್ರವಾಸಿ ಪ್ರದೇಶಗಳಿಗೆ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ಗಿರಿ ಪ್ರದೇಶದಲ್ಲಿ ಜನಜಂಗುಳಿಯಿಂದ ವಾಹನ ಪಾರ್ಕಿಂಗ್ ವ್ಯವಸ್ಥೆ ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ಪಶ್ಚಿಮ ಘಟ್ಟಗಳ ತಾಣಗಳ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಪ್ರತಿವಾರ ಚಿಕ್ಕಮಗಳೂರಿಗೆ ಲಗ್ಗೆ ಇಡುವುದು ಮಾಮೂಲು. ಜೊತೆಯಲ್ಲಿ ದಸರಾ ರಜೆ ಕೂಡ ಇದ್ದ ಕಾರಣ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿರುವುದು ಕಂಡುಬಂದಿದೆ.
ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲ ಹೋಂ ಸ್ಟೇಗಳು ಹಾಗೂ ಲಾಡ್ಜ್ಗಳಲ್ಲಿ ರೂಮ್ ಖಾಲಿ ಇಲ್ಲ ಎಂಬ ನಾಮಫಲಕ ಹಾಕಲಾಗಿದೆ. ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಸಂಚಾರಿ ಪೊಲೀಸರಿಗೆ ವಾಹನಗಳ ದಟ್ಟಣೆ ನಿಭಾಯಿಸುವುದು ಸವಾಲಾಗಿ ಪರಿಣಮಿಸಿದೆ. ಮುಖ್ಯವಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ಹೋಟೆಲ್ ಹಾಗೂ ರೆಸ್ಟೋರೆಂಟ್ಗಳ ಬಳಿ ವಾಹನ ಪಾರ್ಕಿಂಗ್ ಮಾಡಲು ಸಮಸ್ಯೆ ಉಂಟಾಗಿದೆ.
ಕೆಮ್ಮಣ್ಣುಗುಂಡಿ, ಬಾಬಾಬುಡನ್ ಗಿರಿ, ದತ್ತಪೀಠ, ಮಾಣಿಕ್ಯಧಾರ, ಮುಳ್ಳಯ್ಯನಗಿರಿ ಬೆಟ್ಟದ ಸೌಂದರ್ಯ ಸವಿಯಲು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಬೆಟ್ಟದ ಮೇಲಿನ ಮೆಟ್ಟಿಲುಗಳು ಹಾಗೂ ವೀಕ್ಷಣಾ ಸ್ಥಳಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಪ್ರವಾಸಿಗರು ಬೆಟ್ಟ ಏರಿ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಚಿಕ್ಕಮಗಳೂರು ನಗರ ಬಿಟ್ಟು ಹೊರಟರೆ ಸಿಗುವ ಕಾಫಿ ತೋಟಗಳ ಸೊಬಗನ್ನು ನೋಡುತ್ತಾ ಪಶ್ಚಿಮ ಘಟ್ಟ ಸಾಲಿನಲ್ಲಿ ಬರುವ ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನಗಿರಿ ಪ್ರದೇಶದಲ್ಲಿ ದಟ್ಟಣೆ ಹೆಚ್ಚಾಗಿ ಕಿಲೋಮೀಟರ್ ಗಟ್ಟಲೆ ಸಂಚಾರ ವ್ಯತ್ಯಯ ಉಂಟಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗರಲ್ಲದೆ ಹೊರರಾಜ್ಯಗಳಿಂದಲೂ ಪ್ರವಾಸಿಗರು ಕಾಫಿ ನಾಡಿಗೆ ಆಗಮಿಸುತ್ತಿರುವುದು ವಿಶೇಷವಾಗಿದ್ದು, ಹಸಿರು ಬೆಟ್ಟಗಳು, ತಂಪಾದ ವಾತಾವರಣ, ಮಂಜಿನ ಸೊಬಗು ಹಾಗೂ ಪ್ರಕೃತಿಯ ಸುಂದರ ದೃಶ್ಯಗಳನ್ನು ಸವಿಯಲು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುರಕ್ಷತೆಗೆ ಸಂಬಂಧಪಟ್ಟಂತೆ ಗಮನ ಹರಿಸಬೇಕಾಗಿದೆ.
