Homeರಾಜ್ಯಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಭೆ

ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಭೆ

ಹುಬ್ಬಳ್ಳಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದ ಜಗದೀಶ ಶೆಟ್ಟರ್‌ ಹಾಗೂ ರೈತ ಮುಖಂಡರ ನಡುವೆ ಹುಬ್ಬಳ್ಳಿಯ ಸರ್ಕ್ಯೂಟ್‌ ಹೌಸ್‌ನಲ್ಲಿ ಸುದೀರ್ಘ ಸಭೆ ನಡೆಯಿತು. ಆದರೆ, ಸಭೆಯಲ್ಲಿ ಯಾವುದೇ ಸ್ಪಷ್ಟ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ರೈತರ ಹೋರಾಟ ಮುಂದುವರಿಯಲಿದೆಯೇ ಅಥವಾ ತಾತ್ಕಾಲಿಕವಾಗಿ ಹಿಂಪಡೆಯಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಸಭೆಯಲ್ಲಿ ರೈತ ಮುಖಂಡರಾದ ಚೂನಪ್ಪ ಪೂಜೇರಿ, ಶಶಿಕಾಂತ್‌ ಗುರೂಜಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು, ಮಾಜಿ ಸಚಿವ ಸಿ.ಸಿ. ಪಾಟೀಲ, ಶಾಸಕ ಮಹೇಶ ತೇಂಗಿನಕಾಯಿ ಹಾಗೂ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, “ರೈತ ಮುಖಂಡರ ನಿಯೋಗ, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಕೇಂದ್ರ ಸರ್ಕಾರ ಯಾವತ್ತೂ ರೈತರ ಪರವಾಗಿದೆ” ಎಂದರು.

“ರೈತರ ಬೇಡಿಕೆಗಳ ಕುರಿತು ಈಗಾಗಲೇ ಸಮಿತಿ ರಚಿಸಲಾಗಿದ್ದು, ಸಮಿತಿಯು ಶೀಘ್ರದಲ್ಲೇ ಸಭೆ ಸೇರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿದೆ. ಈ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗಬೇಕು. ಹೀಗಾಗಿ, ರೈತರು ಹೋರಾಟವನ್ನು ಕೈಬಿಡುವಂತೆ ತಾವು, ಸಂಸದ ಜಗದೀಶ ಶೆಟ್ಟರ್‌ ಹಾಗೂ ಇತರ ನಾಯಕರು ಮನವಿ ಮಾಡಿದ್ದೇವೆ. ಸಭೆಯಲ್ಲಿ ಚರ್ಚಿಸಿದ ವಿಚಾರಗಳಿಗೆ ರೈತ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸಿ.ಸಿ. ಪಾಟೀಲ, “ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ರೈತ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಮಧ್ಯರಾತ್ರಿಯವರೆಗೂ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ರಚಿಸಿರುವ ಸಮಿತಿ ಶೀಘ್ರ ಸಭೆ ಸೇರಿ ರೈತರ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಲಿದೆ” ಎಂದರು.

ತೇಗೂರು ಸಭೆಯತ್ತ ಎಲ್ಲರ ಚಿತ್ತ

ಸಭೆಯ ಬಳಿಕ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, “ಸಚಿವರು, ಸಂಸದರು ಹಾಗೂ ಶಾಸಕರು ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈತ ಮುಖಂಡರು ಹಾಗೂ ರೈತರೊಂದಿಗೆ ಚರ್ಚಿಸಿ ಹೋರಾಟವನ್ನು ಮುಂದುವರಿಸಬೇಕೇ ಅಥವಾ ತಾತ್ಕಾಲಿಕವಾಗಿ ಹಿಂಪಡೆಯಬೇಕೇ ಎಂಬುದರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳದ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲೆಯ ತೇಗೂರಿನಲ್ಲಿ ನಡೆಯಲಿರುವ ರೈತರ ಸಭೆ ಮಹತ್ವ ಪಡೆದುಕೊಂಡಿದೆ. ಈ ಸಭೆಯಲ್ಲಿ ರೈತರ ಹೋರಾಟದ ಮುಂದಿನ ರೂಪುರೇಷೆ ನಿರ್ಧಾರವಾಗುವ ಸಾಧ್ಯತೆಯಿದ್ದು, ಕಬ್ಬು ಬೆಳೆಗಾರರ ಮುಂದಿನ ನಡೆ ಏನಿರಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.

RELATED ARTICLES
spot_img

Latest News