Homeರಾಷ್ಟ್ರೀಯಕರ್ನಾಟಕದಲ್ಲಿ ರಾರಾಜಿಸುತ್ತಿರುವ 'ಸೆಕ್ಸ್ ರಾಜಕೀಯ' : ರಾಜಕಾರಣಿಗಳ ಕಾಮದಾಟಗಳ ಕುರಿತು ಭಾರಿ ಚರ್ಚೆ

ಕರ್ನಾಟಕದಲ್ಲಿ ರಾರಾಜಿಸುತ್ತಿರುವ ‘ಸೆಕ್ಸ್ ರಾಜಕೀಯ’ : ರಾಜಕಾರಣಿಗಳ ಕಾಮದಾಟಗಳ ಕುರಿತು ಭಾರಿ ಚರ್ಚೆ

ಬೆಂಗಳೂರು,ಅ.19- ರಾಜ್ಯ ರಾಜಕೀಯದಲ್ಲಿ ಲೈಂಗಿಕ ಸಿಡಿಗಳು, ಪೆನ್‌ಡ್ರೈವ್‌ಗಳು, ಹನಿಟ್ರ್ಯಾಪ್‌ ಆರೋಪಗಳು ಮತ್ತು ರಹಸ್ಯ ವಿಡಿಯೊಗಳ ವಿವಾದಗಳು ಮತ್ತೆ ಮುನ್ನೆಲೆಗೆ ಬರುತ್ತಿದ್ದು, ರಾಜಕೀಯ ಅಧಿಕಾರದ ಬಳಕೆ, ನಾಯಕರ ಖಾಸಗಿ ಬದುಕು, ಬ್ಲ್ಯಾಕ್‌ಮೇಲ್‌ ಸಾಧ್ಯತೆ ಹಾಗೂ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.ಕಳೆದ ಎರಡು ದಶಕಗಳ ವಿವಿಧ ಘಟನೆಗಳನ್ನು ಗಮನಿಸಿದರೆ, ಇಂತಹ ವಿವಾದಗಳು ಕೇವಲ ವ್ಯಕ್ತಿಗತ ಮಟ್ಟಕ್ಕೆ ಸೀಮಿತವಾಗದೆ ಸರ್ಕಾರಗಳ ಪ್ರತಿಷ್ಠೆ, ಪಕ್ಷಗಳ ರಾಜಕೀಯ ಭವಿಷ್ಯ ಮತ್ತು ಸಾರ್ವಜನಿಕ ವಿಶ್ವಾಸದ ಮೇಲೂ ಪರಿಣಾಮ ಬೀರಿವೆ.

2021ರಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಿಡಿ ವಿವಾದದಿಂದ ಹಿಡಿದು, 2024ರಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದವರೆಗೆ ರಾಜ್ಯ ರಾಜಕೀಯವು ಹಲವು ದೊಡ್ಡ ವಿವಾದಗಳಿಗೆ ಸಾಕ್ಷಿಯಾಗಿದೆ. ಇತ್ತೀಚಿನ ರಾಜಕೀಯ ಕುಟುಕು ಕಾರ್ಯಾಚರಣೆ ಮತ್ತು ಹನಿಟ್ರ್ಯಾಪ್‌ ಆರೋಪಗಳು ಹಳೆಯ ಚರ್ಚೆಗೆ ಮತ್ತೆ ಜೀವ ತುಂಬಿವೆ.

ರಾಜಕೀಯ ನಾಯಕರು ಅಧಿಕಾರದಲ್ಲಿರುವಾಗ ಅವರ ಸಂಪರ್ಕಗಳು, ನಿರ್ಧಾರಗಳು ಮತ್ತು ವೈಯಕ್ತಿಕ ನಡವಳಿಕೆಗಳು ಸಾರ್ವಜನಿಕ ಚರ್ಚೆಯ ಭಾಗವಾಗುತ್ತವೆ. ಇಂಥ ಸಂದರ್ಭಗಳಲ್ಲಿ ರಹಸ್ಯವಾಗಿ ಚಿತ್ರೀಕರಿಸಿದ ದೃಶ್ಯಗಳು ಅಥವಾ ಧ್ವನಿಮುದ್ರಣಗಳು ರಾಜಕೀಯ ಒತ್ತಡ ಸೃಷ್ಟಿಸುವ ಸಾಧನಗಳಾಗುವ ಅಪಾಯವಿದೆ.

ಮಾರ್ಚ್‌ 2025ರಲ್ಲಿ ಆಗಿನ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಕರ್ನಾಟಕವನ್ನು ಸಿಡಿ ಮತ್ತು ಪೆನ್‌ಡ್ರೈವ್‌ಗಳ ಕಾರ್ಖಾನೆ ಎಂದು ಕರೆಯಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ಸುಮಾರು 48 ರಾಜಕಾರಣಿಗಳು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಎಂಬ ಆರೋಪವನ್ನೂ ಅವರು ಮುಂದಿಟ್ಟಿದ್ದರು. ಆದರೆ ಈ ಹೇಳಿಕೆಗೆ ಸಂಬಂಧಿಸಿದಂತೆ ಎಲ್ಲ ವ್ಯಕ್ತಿಗಳ ಗುರುತು ಅಥವಾ ಆರೋಪಗಳ ಸತ್ಯಾಸತ್ಯತೆ ಸಾರ್ವಜನಿಕವಾಗಿ ದೃಢಪಟ್ಟಿಲ್ಲ.

ಪ್ರಮುಖ ವಿವಾದಗಳ
2024-2025: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ
ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳು 2024ರಲ್ಲಿ ಬಹಿರಂಗವಾದ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಉಂಟಾಯಿತು. ಹಲವು ಮಹಿಳೆಯರು ದೂರು ನೀಡಿದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸಿತು. 2025ರ ಆಗಸ್ಟ್‌ನಲ್ಲಿ ವಿಶೇಷ ನ್ಯಾಯಾಲಯವು ಒಂದು ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಈ ಪ್ರಕರಣವು ಮಹಿಳೆಯರ ಮೇಲಿನ ದೌರ್ಜನ್ಯ, ರಾಜಕೀಯ ಪ್ರಭಾವ ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಕುರಿತು ರಾಷ್ಟ್ರಮಟ್ಟದ ಚರ್ಚೆಗೆ ಕಾರಣವಾಯಿತು.

2021: ರಮೇಶ್‌ ಜಾರಕಿಹೊಳಿ ಸಿಡಿ ವಿವಾದ
ಆಗಿನ ಜಲಸಂಪನೂಲ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ವಿಡಿಯೊ ಬಹಿರಂಗವಾದ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷದ ಮೂಲಕ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆಂಬ ಆರೋಪ ಕೇಳಿಬಂದಿತ್ತು. ಜಾರಕಿಹೊಳಿ ಆರೋಪಗಳನ್ನು ನಿರಾಕರಿಸಿ, ಇದೊಂದು ರಾಜಕೀಯ ಷಡ್ಯಂತ್ರ ಎಂದು ಪ್ರತಿಪಾದಿಸಿದ್ದರು. ಪ್ರಕರಣವು ರಾಜಕೀಯ ಪ್ರತಿಭಟನೆ ಮತ್ತು ತನಿಖೆಗೆ ಒತ್ತಾಯಕ್ಕೆ ಕಾರಣವಾಯಿತು.

2016: ಎಚ್‌.ವೈ. ಮೇಟಿ ಪ್ರಕರಣ
ಆಗಿನ ಅಬಕಾರಿ ಸಚಿವ ಎಚ್‌.ವೈ. ಮೇಟಿ ಅವರಿಗೆ ಸಂಬಂಧಿಸಿದ ವಿಡಿಯೊ ವಿವಾದದ ಬಳಿಕ ಅವರು ರಾಜೀನಾಮೆ ನೀಡಿದರು. ನಂತರ ಮಹಿಳೆ ಆರೋಪಗಳನ್ನು ಹಿಂಪಡೆದರು ಎಂದು ವರದಿಯಾಯಿತು. ಸಿಐಡಿ ತನಿಖೆಯಲ್ಲಿ ಅವರ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.

2012: ವಿಧಾನಸಭೆಯಲ್ಲಿ ಅಶ್ಲೀಲ ದೃಶ್ಯ ವೀಕ್ಷಣೆ ವಿವಾದ
ವಿಧಾನಸಭೆಯ ಕಲಾಪದ ವೇಳೆ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯ ವೀಕ್ಷಣೆ ಆರೋಪದ ಹಿನ್ನೆಲೆಯಲ್ಲಿ ಸಚಿವರಾಗಿದ್ದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್‌ ಮತ್ತು ಜೆ.ಕೃಷ್ಣ ಪಾಲೆಮಾರ್‌ ರಾಜೀನಾಮೆ ನೀಡಿದ್ದರು. ಸದನದ ಗೌರವ ಮತ್ತು ಜನಪ್ರತಿನಿಧಿಗಳ ನಡವಳಿಕೆ ಕುರಿತು ಈ ಘಟನೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು.

2013ರಲ್ಲಿ ರಘುಪತಿ ಭಟ್‌ ಅವರಿಗೆ ಸಂಬಂಧಿಸಿದ ವಿಡಿಯೋವಿವಾದ, 2014ರಲ್ಲಿ ಎಸ್‌‍.ಎ.ರಾಮದಾಸ್‌‍ ವಿರುದ್ಧ ಕೇಳಿಬಂದ ಆರೋಪ ಹಾಗೂ 2019ರಲ್ಲಿ ಅರವಿಂದ ಲಿಂಬಾವಳಿ ಅವರಿಗೆ ಸಂಬಂಧಿಸಿದ ವಿಡಿಯೋ ವಿವಾದಗಳು ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗಿದ್ದವು.

ಕರ್ನಾಟಕದಲ್ಲೇ ಇಂತಹ ವಿವಾದಗಳು ಪದೇಪದೇ ಏಕೆ?
ರಾಜಕೀಯ ಪೈಪೋಟಿ ಮತ್ತು ಪ್ರತಿಷ್ಠೆಯ ಹೋರಾಟ: ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ಸಂಘರ್ಷದಲ್ಲಿ ಆರೋಪ-ಪ್ರತ್ಯಾರೋಪಗಳು ರಾಜಕೀಯ ಅಸ್ತ್ರಗಳಾಗಬಹುದು. ಸೋರಿಕೆಯಾದ ವಿಡಿಯೊ ಅಥವಾ ಧ್ವನಿಮುದ್ರಣವು ವ್ಯಕ್ತಿಯಷ್ಟೇ ಅಲ್ಲದೆ ಅವರ ಪಕ್ಷದ ವಿಶ್ವಾಸಾರ್ಹತೆಯ ಮೇಲೂ ಪರಿಣಾಮ ಬೀರಬಹುದು.

ಅಧಿಕಾರದ ಪ್ರಭಾವ -ದುರುಪಯೋಗದ ಆರೋಪ:
ಸರ್ಕಾರಿ ಉದ್ಯೋಗ, ವರ್ಗಾವಣೆ, ಗುತ್ತಿಗೆ ಅಥವಾ ಇತರ ಸೌಲಭ್ಯಗಳ ಆಮಿಷದ ಮೂಲಕ ಲೈಂಗಿಕ ಶೋಷಣೆ ನಡೆದಿದೆ ಎಂಬ ಆರೋಪಗಳು ಸಾರ್ವಜನಿಕ ಜೀವನದ ನೈತಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ಆದರೆ ಇಂತಹ ಆರೋಪಗಳಿಗೆ ಸ್ವತಂತ್ರ ಸಾಕ್ಷ್ಯ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯ.

ಬ್ಲ್ಯಾಕ್‌ಮೇಲ್‌ ಮತ್ತು ಗೌಪ್ಯತೆಯ ದುರುಪಯೋಗ:
ಖಾಸಗಿ ದೃಶ್ಯಗಳನ್ನು ರಹಸ್ಯವಾಗಿ ದಾಖಲಿಸುವುದು ಅಥವಾ ಅವುಗಳನ್ನು ಬಹಿರಂಗಪಡಿಸುವ ಬೆದರಿಕೆ ಹಾಕುವುದು ವ್ಯಕ್ತಿಯ ಗೌರವ ಮತ್ತು ಸುರಕ್ಷತೆಗೆ ಧಕ್ಕೆ ತರಬಹುದು. ರಾಜಕೀಯ ಲಾಭಕ್ಕಾಗಿ ಇಂತಹ ವಸ್ತುಗಳನ್ನು ಬಳಸಿದರೆ ಅದು ಪ್ರಜಾಪ್ರಭುತ್ವದ ಆರೋಗ್ಯಕ್ಕೂ ಅಪಾಯಕಾರಿ.

ತನಿಖೆ ಮತ್ತು ನ್ಯಾಯದ ವಿಳಂಬ: ಕೆಲವು ಪ್ರಕರಣಗಳಲ್ಲಿ ಆರೋಪಗಳು ಸಾಬೀತಾಗದೆ ಅಂತ್ಯಗೊಂಡರೆ, ಇನ್ನು ಕೆಲವು ಪ್ರಕರಣಗಳು ನ್ಯಾಯಾಲಯದ ತೀರ್ಪಿನವರೆಗೆ ಸಾಗುತ್ತವೆ. ತನಿಖೆಯ ಫಲಿತಾಂಶಗಳ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ದೊರೆಯದಿದ್ದರೆ ಅನುಮಾನ ಮತ್ತು ರಾಜಕೀಯ ಪ್ರಚಾರಕ್ಕೆ ಅವಕಾಶ ಸಿಗುತ್ತದೆ.

RELATED ARTICLES
spot_img

Latest News