ಮೈಸೂರು,ಅ.21- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಜನಸಾಗರವೇ ಹರಿದುಬಂದಿದ್ದು, ಸಡಗರದಿಂದ ಆಕರ್ಷಣೀಯ ಜಂಬೂ ಸವಾರಿ ಎಲ್ಲರ ಕಣನ ಸೆಳೆದಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 416ನೇ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಜಂಬೂಸವಾರಿಯನ್ನು ಲಕ್ಷಾಂತರ ಭಕ್ತರು ವೀಕ್ಷಿಸಿ ಭಾವಪರವಶರಾಗಿದ್ದಾರೆ.
ಮಧ್ಯಾಹ್ನ 1.35 ರಿಂದ 1.56ರ ವರೆಗೆ ಇದ್ದ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ದಸರಾ ಮೆರವಣಿಗೆಗೆ ಚಾಲನೆ ನೀಡಿದರು.
ಮೈಸೂರು ಪೇಟ ತೊಟ್ಟು ಬಿಳಿ ವಸ್ತ್ರದಲ್ಲಿ ಜಗಮಗಿಸಿದ ಸಿಎಂ ಜೊತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಚಿವರಾದ ಶಿವರಾಜ್ ತಂಗಡಗಿ, ಬಾಲಕೃಷ್ಣ, ನರೇಂದ್ರ ಸ್ವಾಮಿ, ಕೆ.ಎಸ್.ಬಸವಂತಪ್ಪ, ಉಪಸಭಾಪತಿ ಉಮಾಶ್ರೀ, ಶಾಸಕರಾದ ರಘುಮೂರ್ತಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ನಂದಿಧ್ವಜ ಪೂಜೆ ಬಳಿಕ ಸಿಎಂ ಹೇಳಿಕೆ :
ನಂದಿಧ್ವಜ ಪೂಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು. ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿ ನಾಡಿನ ಎಲ್ಲ ಜನರಿಗೂ ಆರೋಗ್ಯ, ಸಂಪತ್ತು ಹಾಗೂ ಸಮೃದ್ಧ ಮಳೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.ನಂದಿಧ್ವಜ ಪೂಜೆ ನೆರವೇರುತ್ತಿದ್ದಂತೆ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ದೊರೆಯಿತು.
ಜಂಬೂಸವಾರಿಯ ವೈಭವ :
ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ 60 ಸ್ತಬ್ಧಚಿತ್ರಗಳು ಹಾಗೂ 140ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದವು.
ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ :
ಸಂಜೆ 4.10 ರಿಂದ 4.35ರ ವರೆಗೆ ಇದ್ದ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ನೆರವೇರಿತು. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ವಿರಾಜಮಾನಳಾಗಿದ್ದಳು. ಮೆರವಣಿಗೆಗೆ ಪೊಲೀಸ್ ಬ್ಯಾಂಡ್ ಹಾಗೂ ಅಶ್ವಾರೋಹಿ ದಳ ಮತ್ತಷ್ಟು ಮೆರಗು ನೀಡಿತು.ಪ್ರಥಮ ಬಾರಿಗೆ ಅಂಬಾರಿ ಹೊತ್ತ ಕ್ಯಾಪ್ಟನ್ ಪ್ರಶಾಂತ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆಯಿತು. ಪ್ರಶಾಂತನಿಗೆ ಕಾವೇರಿ, ರೂಪ ಸೇರಿದಂತೆ 12 ಆನೆಗಳು ಸಾಥ್ ನೀಡಿದವು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಪ್ರಶಾಂತ ಸೇರಿದಂತೆ ಎಲ್ಲಾ ದಸರಾ ಆನೆಗಳು ವಿವಿಧ ಕಲೆಗಳ ಚಿತ್ತಾರದೊಂದಿಗೆ ಸಿಂಗಾರಗೊಂಡಿದ್ದವು. ಅರಮನೆ ಆವರಣದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಆನೆಗಳಿಗೆ ಸಿಂಗಾರದ ಕಾರ್ಯ ಆರಂಭವಾಯಿತು. ಮಾವುತರು ಮತ್ತು ಕಾವಾಡಿಗಳು ಆನೆಗಳಿಗೆ ಸ್ನಾನ ಮಾಡಿಸಿ, ಹಣೆಗೆ ಕುಂಕುಮ, ಗಂಧ, ಚಿನ್ನದ ಪತ್ರದ ಅಲಂಕಾರ ಮಾಡಿದರು. ಬೆನ್ನ ಮೇಲೆ ವರ್ಣರಂಜಿತ ಜೂಲ್, ಹೊದಿಕೆ, ಗಂಟೆಗಳು ಮತ್ತು ಹೂವಿನ ಹಾರಗಳಿಂದ ಅಲಂಕಾರ ಮಾಡಲಾಗಿತ್ತು.








ಈ ಬಾರಿ ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಆಕರ್ಷಕ ಸಿಂಗಾರ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯಿತು. 54 ವರ್ಷದ ಪ್ರಶಾಂತ ಆನೆ ಮೊದಲ ಬಾರಿಗೆ 750 ಕೆಜಿ ಚಿನ್ನದ ಅಂಬಾರಿಯನ್ನು ಹೊರಲಿದೆ. ಜೊತೆಗೆ ನಿಶಾನೆ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ, ರೂಪಾ, ಗೋಪಿ, ಧನಂಜಯ ಸೇರಿದಂತೆ ಎಲ್ಲಾ ಆನೆಗಳಿಗೂ ಆಕರ್ಷಕ ಬಣ್ಣಬಣ್ಣಗಳಿಂದ ಚಿತ್ತಾರ ಬರೆಯಲಾಗಿದ್ದು, ಜನರ ಕಣನ ಸೆಳೆಯುವಂತಿತ್ತು.





ಅಂಬಾ ವಿಲಾಸದಲ್ಲಿ ಸಂಪ್ರದಾಯದ ಸಡಗರ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ದಿನವಾದ ವಿಜಯದಶಮಿ ಹಿನ್ನೆಲೆಯಲ್ಲಿ ರಾಜಪರಂಪರೆಯ ಸಂಭ್ರಮ, ಅಂಬಾ ವಿಲಾಸ ಅರಮನೆಯಲ್ಲಿ ಸಂಪ್ರದಾಯ ಪೂಜಾ ಕಾರ್ಯಗಳು ನೆರವೇರಿದವು. ರಾಜ ಪರಂಪರೆಯಂತೆ ವಿಜಯದಶಮಿ ದಿನದ ವಿಶೇಷ ಪೂಜಾ ವಿಧಿ ವಿಧಾನಗಳು ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯ ನಡೆದವು.
ಬೆಳಗ್ಗೆ ಶುಭ ಮುಹೂರ್ತದಲ್ಲಿ ಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ದೇವತಾ ಪೂಜೆ, ನವರಾತ್ರಿ ಪೂಜೆಯ ಕೊನೆಯ ದಿನದ ವಿಶೇಷ ಅಲಂಕಾರ ಪೂಜೆ ನೆರವೇರಿತು. ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಪ್ರದಾಯದಂತೆ ರಾಜ ಉಡುಪು ಧರಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುವಿನ ಆಗಮನ :
ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿನ ಆಗಮನವಾಯಿತು. ಅರಮನೆಯ ಆವರಣದಲ್ಲಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ರಾಜವಂಶಸ್ಥರಿಂದ ಶಮಿ ಪೂಜೆ ನೆರವೇರಿತು. ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸುವುದು ವಿಜಯದಶಮಿಯ ಪ್ರಮುಖ ಸಂಪ್ರದಾಯವಾಗಿದ್ದು, ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಭುವನೇಶ್ವರಿ ದೇವಸ್ಥಾನದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ವಿಜಯಯಾತ್ರೆ ನೆರವೇರಿಸಲಾಯಿತು.
ಆಯುಧ ಪೂಜೆ, ರಥ ಪೂಜೆಗಳ ನಂತರ ಸಂಜೆ ಬಳಿಕ ಕಂಕಣ ವಿಸರ್ಜನೆಯೊಂದಿಗೆ ಅರಮನೆಯ ದಸರಾ ಸಂಪನ್ನಗೊಳ್ಳಲಿದೆ. ಬಳಿಕ ಸಂಜೆ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ರಾಜವಂಶಸ್ಥರು ಚಾಲನೆ ನೀಡಿದರು.
