Friday, November 22, 2024
Homeರಾಜ್ಯಅಧಿಕೃತವಾಗಿ ಬಿಜೆಪಿ ಸೇರಿದ ಸುಮಲತಾ ಅಂಬರೀಶ್

ಅಧಿಕೃತವಾಗಿ ಬಿಜೆಪಿ ಸೇರಿದ ಸುಮಲತಾ ಅಂಬರೀಶ್

ಬೆಂಗಳೂರು,ಏ.5- ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನಿ ಅಸ್ತ್ರದ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಇತಿಹಾಸ ಸೃಷ್ಟಿಸಿದ್ದ ಸುಮಲತ ಅಂಬರೀಶ್ ಇಂದು ವಿಧ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಸುಮಲತ ಅಂಬರೀಶ್ ಜೊತೆಗೆ ಮಾಜಿ ಲೋಕಸಭಾ ಸದಸ್ಯ ಎಲ್.ಆರ್.ಶಿವರಾಮೇಗೌಡ ಹಾಗೂ ಸುಮಲತ ಅಂಬರೀಶ್ ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರ ಸಮ್ಮುಖದಲ್ಲಿ ಕೇಸರಿ ಶಾಲು ಹೊದ್ದ ಸುಮಲತ ಅಂಬರೀಶ್ ಹಾಗೂ ಬೆಂಬಲಿಗರು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು.

ಅವರ ಸೇರ್ಪಡೆಯಿಂದಾಗಿ ಹಳೇ ಮೈಸೂರು ಭಾಗದಲ್ಲಿ(ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ) ಬಿಜೆಪಿಗೆ ಹೆಚ್ಚಿನ ಶಕ್ತಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಪಕ್ಷ ಸೇರ್ಪಡೆಗೂ ಮುನ್ನ ಸುಮಲತ ಹಾಗೂ ಅವರ ಬೆಂಬಲಿಗರು ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

ಪಕ್ಷ ಸೇರ್ಪಡೆಗೂ ಮುನ್ನ ಸುಮಲತ ಹಾಗೂ ಅವರ ಬೆಂಬಲಿಗರು ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್ ಅವರ ಸಮಾಗೆ ಪೂಜೆ ಸಲ್ಲಿಸಿದರು.

ನಂತರ ನೇರವಾಗಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು.ಈ ವೇಳೆ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಕಚೇರಿಗೆ ಆಗಮಿಸುತ್ತಿದ್ದಂತೆ ಜೈಕಾರದ ಘೋಷಣೆಗಳು ಮೊಳಗಿದವು. ಬಿಜೆಪಿ ಸೇರುವ ಮುನ್ನ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಸುಮಲತ ಅಂಬರೀಶ್ ಭಾವನಾತ್ಮಕವಾದ ಸಂದೇಶವನ್ನು ಪೋಸ್ಟ್ ಮಾಡಿದ್ದರು.

ಮಂಡ್ಯದ ಅಭಿವೃದ್ಧಿಯನ್ನೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದೆ. ಅದರಂತೆಯೇ, ಬಿಜೆಪಿ ನಾಯಕರ ಸಮ್ಮುಖದಲ್ಲಿ ಏಪ್ರಿಲ್ 5ರ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಆಗುತ್ತಿರುವೆ.

ನಮ್ಮ ಕರುನಾಡಿನ ಸಕ್ಕರೆಯ ನಾಡು ಮಂಡ್ಯದ ನನ್ನ ಸ್ವಾಭಿಮಾನಿ ಬಂಧುಗಳು, ಡಾ.ಅಂಬರೀಶ್ ಅಭಿಮಾನಿಗಳು ಹಾಗೂ ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದ ಎಂದಿನಂತೆ ಇರಲಿ ಎಂದು ನನ್ನ ಸವಿನಯ ಕೋರಿಕೆ ಎಂದು ಬರೆದುಕೊಂಡಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್‍ಗಾಗಿ ಸುಮಲತ ಸಾಕಷ್ಟು ಹೋರಾಟ ನಡೆಸಿದ್ದರು. ಬಿಜೆಪಿ ಹೈಕಮಾಂಡ್ ಮಂಡ್ಯ ಕ್ಷೇತ್ರವನ್ನು ಮೈತ್ರಿ ಪಕ್ಷ ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಲ್ಲದೇ, ಬೇರೆ ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಸುಮಲತಾಗೆ ಆಫರ್ ನೀಡಲಾಗಿತ್ತು. ಆದರೆ ಸುಮಲತ ಮಂಡ್ಯ ಹೊರತುಪಡಿಸಿ ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂಬ ಅಚಲ ನಿರ್ಧಾರ ತೆಗೆದುಕೊಂಡಿದ್ದರು. ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲಿದ್ದಾರೆ ಎಂಬಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು.

ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬೇಸರಗೊಂಡಿದ್ದ ಸಂಸದೆ ಸುಮಲತ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಜೆಪಿನಗರದ ಮನೆಯಲ್ಲಿ ಭೇಟಿ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಬೆಂಬಲ ಮತ್ತು ಸಹಕಾರ ಕೋರಿದ್ದರು. ಬಳಿಕ ಮಂಡ್ಯ ಕ್ಷೇತ್ರದ ಅಭಿಮಾನಿಗಳು ಮತ್ತು ಬೆಂಬಲಿಗರ ಅಭಿಪ್ರಾಯ ಪಡೆದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು.

ಮೊನ್ನೆ ಮಂಡ್ಯದಲ್ಲಿ ಸಭೆ ನಡೆಸಿ ಬಿಜೆಪಿ ಸೇರುವುದಾಗಿ ಪ್ರಕಟಿಸಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ, ಹಾಗೆಯೇ ಮಂಡ್ಯ ಬಿಟ್ಟು ಬೇರೆ ಎಲ್ಲಿಯೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ನಿರ್ಧಾರ ಘೋಷಣೆ ಮಾಡಿದ್ದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಗೆದ್ದು ದೇಶದ ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಬಿಜೆಪಿಯು ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸುಮಲತ ಅವರಿಗೆ ಬೆಂಬಲ ನೀಡಿತ್ತು.

RELATED ARTICLES

Latest News