ಭುವನೇಶ್ವರ, ಅ. 22 (ಪಿಟಿಐ)- ಪದೇ ಪದೇ ವಿದೇಶ ಪ್ರವಾಸ ಮಾಡುವ ರಾಹುಲ್ ಗಾಂಧಿ ಅವರು, ಚುನಾವಣೆ ನಡೆಸದೆಯೇ ಸರ್ಕಾರವನ್ನು ಬದಲಾಯಿಸುವುದು ಹೇಗೆ ಎಂಬ ಬಗ್ಗೆ ಅಲ್ಲಿಂದ ಮಾರ್ಗದರ್ಶನ ಪಡೆಯುತ್ತಿರಬಹುದು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಲೇವಡಿ ಮಾಡಿದ್ದಾರೆ.ರಾಹುಲ್ ಗಾಂಧಿ ಅವರು ಚುನಾವಣೆಗಳಿಲ್ಲದೆಯೇ ಸರ್ಕಾರವನ್ನು ಬದಲಾಯಿಸಲು ವಿದೇಶದಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ ಮತ್ತು ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಈ ಹಿಂದೆ ಹಲವು ಬಾರಿ ವಿಫಲರಾಗಿರುವ ರಾಹುಲ್ ಗಾಂಧಿ ಅವರನ್ನು ಮತ್ತೆ ಮುನ್ನೆಲೆಗೆ ತರಲು ದೇಶದಲ್ಲಿ ಅರಾಜಕತೆಯನ್ನು ಹರಡಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿದರು.
ಭಾರತದಲ್ಲಿ ಅಸ್ಥಿರತೆಯನ್ನು ಉಂಟುಮಾಡಲು ಮತ್ತು ಚುನಾವಣೆ ನಡೆಸದೆಯೇ ಸರ್ಕಾರವನ್ನು ಬದಲಾಯಿಸಲು ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್ ಮತ್ತು ಅವರ ಸಹಚರರಿಂದ ಮಾರ್ಗದರ್ಶನ ಪಡೆಯಲು ರಾಹುಲ್ ಗಾಂಧಿ ವಿದೇಶಕ್ಕೆ ಪ್ರಯಾಣಿಸಿದ್ದರು ಎಂದು ಬಿಜೆಪಿ ನಾಯಕ ಆರೋಪಿಸಿದರು.
ನೇಹಾ ಬೋರಾ, ಪ್ರಶಾಂತ್ ಭೂಷಣ್ ಮತ್ತು ಸಂಜಯ್ ರಾವುತ್ ಅವರು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಬದಲಾವಣೆಯೇ ಅವರ ಗುರಿಯಾಗಿದೆ. ಇದಕ್ಕಾಗಿ ಹಿಂಸಾಚಾರ ಅಗತ್ಯವೆಂದಾದರೆ ಅದಕ್ಕೂ ಬೆಂಬಲ ನೀಡಲು ಕೆಲವರು ಮುಂದೆ ಬಂದಿದ್ದಾರೆ ಎಂದು ಪಾತ್ರ ಹೇಳಿದರು.
ಕಾಂಗ್ರೆಸ್ ಮತ್ತು ಅದರ ಸಹಚರರನ್ನು ಭಾರತದ ಶತ್ರುಗಳು ಎಂದು ಕರೆದ ಬಿಜೆಪಿ ನಾಯಕ, ಅವರು ನವೆಂಬರ್ 1ರಂದು ರಾಮ್ಲೀಲಾ ಮೈದಾನದಲ್ಲಿ ರ್ಯಾಲಿಯೊಂದನ್ನು ಆಯೋಜಿಸಲು ಯೋಜಿಸಿದ್ದಾರೆ ಎಂದು ಹೇಳಿದರು.
ಗಮನಾರ್ಹವೆಂದರೆ, 1984ರ ನವೆಂಬರ್ 1ರಂದು ಸಿಖ್ ವಿರೋಧಿ ಗಲಭೆಗಳು ನಡೆದಿದ್ದವು. ಸಿಖ್ ಸಮುದಾಯವು ಇವರಿಗೆ ತಕ್ಕ ಉತ್ತರ ನೀಡಲಿದೆ ಎಂದು ಪಾತ್ರ ಹೇಳಿದರು.ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿಜಯದಶಮಿ ಭಾಷಣದಲ್ಲಿ ಅತ್ಯಂತ ಪ್ರಮುಖ ಸಂದೇಶವೊಂದನ್ನು ನೀಡಿದ್ದಾರೆ ಎಂದು ಪಾತ್ರ ಉಲ್ಲೇಖಿಸಿದರು.
ರಾಷ್ಟ್ರದ ಗೌರವಕ್ಕೆ ಧಕ್ಕೆ ತರುವವರು, ಅದರ ಘನತೆಯನ್ನು ಕುಗ್ಗಿಸುವವರು, ದೇಶವನ್ನು ವಿಭಜಿಸಲು ಪ್ರಯತ್ನಿಸುವವರು ಹಾಗೂ ಭಾರತದ ಸಂಸ್ಕೃತಿ ಮತ್ತು ಭಾರತವನ್ನೇ ದ್ವೇಷಿಸುವವರು ರಾಷ್ಟ್ರದ ಶತ್ರುಗಳು ಎಂದು ಪ್ರಧಾನಿ ಹೇಳಿದ್ದರು. ಭಾರತದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಹೇಗೆ ಕಿತ್ತೊಗೆಯಬೇಕು ಎಂಬುದರ ಕುರಿತು ನಿರ್ದೇಶನ ಪಡೆಯಲು ವಿದೇಶಕ್ಕೆ ಪ್ರಯಾಣಿಸುವವರೇ ಈ ಶತ್ರುಗಳು ಎಂದು ಪ್ರಧಾನಿ ನಿನ್ನೆ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದರು.
