ಬೆಂಗಳೂರು,ಏ.5- ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುವುದು ವರಿಷ್ಠರ ವಿವೇಚನೆಗೆ ಬಿಟ್ಟ ವಿಚಾರ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಟಿ.ಸೋಮಶೇಖರ್ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲೂ ಅವರ ಕಾಂಗ್ರೆಸ್ ಅಭ್ಯರ್ಥಿಗೆ ಅವರು ಮತ ಚಲಾಯಿಸಿದ್ದರು. ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡುವ ಕುರಿತು ವರಿಷ್ಠರೇ ತೀರ್ಮಾನಿಸುತ್ತಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜೀವ್ಗೌಡ ಪರವಾಗಿ ಅವರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಬಿಜೆಪಿಯಲ್ಲಿ ಅವರಿಗೆ ಇರಲಾಗದಂತಹ ಪರಿಸ್ಥಿತಿ ಇದ್ದರೆ ಪಕ್ಷ ಬಿಟ್ಟು ಹೋಗಲು ಸ್ವತಂತ್ರರು. ಒಂದು ಪಕ್ಷದಲ್ಲಿ ಇದ್ದುಕೊಂಡು ಅದೇ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಬಾರದು ಎಂದು ತಿರುಗೇಟು ನೀಡಿದರು.
ಸುಮಲತಾ ಅಂಬರೀಶ್ ಅವರ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಈ ಹಿಂದೆ ಮಂಡ್ಯ ಲೋಕಸಭಾ ಅಭ್ಯರ್ಥಿ ಆದಾಗ ಅವರಿಗೆ ಬೆಂಬಲ ಘೋಷಣೆ ಮಾಡಿದ್ದೇವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಕೊಟ್ಟಿದ್ದರು. ಈಗ ಬಿಜೆಪಿ ಸೇರುತ್ತಿದ್ದಾರೆ. ಬಹಳ ಸಂತೋಷದ ವಿಚಾರ ಎಂದರು.
ಅವರ ಪ್ರಭಾವವನ್ನು ಬಳಸಿಕೊಂಡು ಮಂಡ್ಯ ಹಾಗೂ ಮೈಸೂರನ್ನು ಗೆಲ್ಲುತ್ತೇವೆ. ಚುನಾವಣಾ ಪ್ರಚಾರಕ್ಕೆ ಅವರನ್ನು ಬಳಸಿಕೊಳ್ಳುತ್ತೇವೆ. ಈಗಾಗಲೇ ಅವರು ಕೇಂದ್ರ ನಾಯಕರ ಜೊತೆ ಮಾತಾಡಿದ್ದಾರೆ. ಅವರಿಗೆ ಏನ್ ಗೌರವ ಕೊಡಬೇಕೋ ಅದು ಸಿಗುತ್ತದೆ ಎಂದು ಹೇಳಿದರು.
ಮೊನ್ನೆ ಅಮಿತ್ ಶಾ ಅವರು ಬಂದಾಗ, ಜೆಡಿಎಸ್ ಬಿಜೆಪಿ ತಳಮಟ್ಟದಿಂದಲೇ ಹೊಂದಾಣಿಕೆ ಆಗಬೇಕು ಎಂದು ಹೇಳಿದ್ದಾರೆ. ಮೈತ್ರಿ ಬಗ್ಗೆ ಯಾವುದೇ ಅಪಸ್ವರ ಎದ್ದಿಲ್ಲ . ಬೀದರ್ನಲ್ಲಿ ಅಸಮಾಧಾನ ಶಮನವಾಗಿದೆ. ಎಲ್ಲರೂ ಒಟ್ಟಾಗಿದ್ದೇವೆ ಯಾವುದೇ ಸಮಸ್ಯೆ ಇಲ್ಲ ಎಂದರು.
ರಾಜ್ಯದ ಎಲ್ಲಾ ಕಡೆ ಸಮನ್ವಯ ಸಮಿತಿ ಸಭೆ ಮಾಡುತ್ತಿದ್ದೇವೆ. ಜೆಡಿಎಸ್-ಬಿಜೆಪಿ ಹಾಲು-ಜೇನಿನಂತೆ ಒಂದುಗೂಡುತ್ತಿದ್ದೇವೆ. ಹಾಲು ಯಾವುದು ಜೇನು ಯಾವುದು ಎಂದು ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ಒಂದಾಗಿದೆ ಎಂದು ಅವರು ಹೇಳಿದರು.