ಬೆಂಗಳೂರು, ಅ. 22- ದಸರಾ ಉತ್ಸವದ ನಂತರವೂ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಚೇತರಿಕೆ ಕಾಣದೆ ಇಳಿಮುಖದ ಹಾದಿ ಮುಂದುವರಿದಿದೆ. ಸ್ಥಿರವಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಚಿನಿವಾರಪೇಟೆಯಲ್ಲಿ ಕುಸಿತ ಕಂಡಿವೆ. ಕಳೆದ ನಾಲ್ಕೈದು ತಿಂಗಳಿನಿಂದ ಏರಿಳಿತ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿ ದರಗಳು ಸದ್ಯಕ್ಕೆ ಸ್ಥಿರತೆ ಕಾಣುವ ಲಕ್ಷಣಗಳಿಲ್ಲ.
ಕಳೆದ ಹತ್ತು ದಿನಗಳಲ್ಲಿ ಚಿನ್ನದ ದರ ಎರಡು ದಿನ ಮಾತ್ರ ಏರಿಕೆಯಾಗಿದ್ದು, ಮೂರು ದಿನ ಸ್ಥಿರವಾಗಿತ್ತು. ಐದು ದಿನಗಳ ಕಾಲ ಇಳಿಕೆ ಕಂಡಿದೆ. ಸಾಲು ಸಾಲು ಹಬ್ಬಗಳ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಕೆಯಾಗುತ್ತಿರುವುದು ಆಭರಣ ಪ್ರಿಯರಿಗೆ ಖುಷಿ ತಂದಿದ್ದರೆ, ವರ್ತಕರನ್ನು ಗೊಂದಲಕ್ಕೀಡು ಮಾಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಚಿನ್ನದ ಬೆಲೆ ಸುಮಾರು ಒಂದು ಸಾವಿರ ರೂ.ನಷ್ಟು ಕಡಿಮೆಯಾಗಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿಯ ಪ್ರಕಾರ, ನಿನ್ನೆ ಸ್ಥಿರವಾಗಿದ್ದ ಚಿನ್ನದ ದರ ಇಂದು ಕುಸಿತ ಕಂಡಿದೆ. ಅ. 20ರಂದು ಕೂಡ ಇಳಿಕೆಯಾಗಿತ್ತು. ಇಂದು ಬೆಳಗಿನ ಮಾಹಿತಿಯ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 170 ರೂ. ಇಳಿಕೆಯಾಗಿದ್ದು, 14,438 ರೂ.ಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 155 ರೂ. ಕಡಿಮೆಯಾಗಿದ್ದು, 13,235 ರೂ.ಗೆ ಇಳಿದಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 127 ರೂ. ಕುಸಿತ ಕಂಡಿದ್ದು, 10,829 ರೂ.ಗೆ ತಲುಪಿದೆ.
ಚಿನ್ನದಂತೆ ಪ್ಲಾಟಿನಂ ಆಭರಣಗಳ ಬೆಲೆಯೂ ಕಡಿಮೆಯಾಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ 1,530 ರೂ. ಇಳಿಕೆಯಾಗಿದ್ದು, ಪ್ರಸ್ತುತ 48 ಸಾವಿರ ರೂ.ಗೆ ತಲುಪಿದೆ. ಅ. 15ರಿಂದ ಸ್ಥಿರವಾಗಿದ್ದ ಬೆಳ್ಳಿ ದರ ಇಂದು ಪ್ರತಿ ಕೆ.ಜಿ.ಗೆ 5,000 ರೂ. ಇಳಿಕೆಯಾಗಿದ್ದು, 2.25 ಲಕ್ಷ ರೂ.ಗೆ ತಲುಪಿದೆ. ಕಳೆದ ಎರಡು ವಾರಗಳಿಂದ ಏರಿಕೆ ಕಾಣದೆ ಇಳಿಮುಖದ ಹಾದಿಯಲ್ಲೇ ಸಾಗುತ್ತಿದೆ. ಅ. 13ರಿಂದ ಇಲ್ಲಿಯವರೆಗೆ ಒಂದು ಕೆ.ಜಿ. ಬೆಳ್ಳಿಯ ಬೆಲೆ 15 ಸಾವಿರ ರೂ. ಕಡಿಮೆಯಾಗಿದೆ.
