Saturday, November 23, 2024
Homeರಾಜಕೀಯ | Politicsಬಿಜೆಪಿ ಸೇರಿದ ಈ ದಿನ ನನಗೆ ಸುದಿನ : ಸುಮಲತಾ ಅಂಬರೀಶ್

ಬಿಜೆಪಿ ಸೇರಿದ ಈ ದಿನ ನನಗೆ ಸುದಿನ : ಸುಮಲತಾ ಅಂಬರೀಶ್

ಬೆಂಗಳೂರು,ಏ.5-ಬಿಜೆಪಿಗೆ ಸೇರಿದ ನನಗೆ ಇಂದು ಜೀವನದಲ್ಲೇ ಮಹತ್ವದ ಸುದಿನ ಎಂದು ಸಂಸದೆ ಸುಮಲತಾ ಅಂಬರೀಶ್ ಬಣ್ಣಿಸಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರ್ಪಡೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ನನಗೆ ಇಂದು ಸುದಿನವಾಗಿದೆ. ಅತ್ಯಂತ ಸಂತೋಷದಿಂದ ಯಾವುದೇ ಷರತ್ತುಗಳನ್ನು ವಿಧಿಸದೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಂಡ್ಯ ಕ್ಷೇತ್ರದಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎಲ್ಲಾ ಸವಾಲುಗಳನ್ನು ಮೆಟ್ಟಿ ಗೆಲುವು ಸಾಧಿಸಿದ್ದು ಐತಿಹಾಸಿಕ ಕ್ಷಣ. ಆ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ. ಮಂಡ್ಯ ಜನತೆ ನೀಡಿದ ತೀರ್ಪು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಬಣ್ಣಿಸಿದರು.

ನಮ್ಮ ಮಂಡ್ಯದ ಜನ ಸಾಕಷ್ಟು ಸಹಕಾರ, ಬೆಂಬಲ ಕೊಟ್ಟರು. ಬಿಜೆಪಿ ಪಕ್ಷವೂ ಬಾಹ್ಯ ಬೆಂಬಲ ಕೊಟ್ಟಿತು. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಕೊಟ್ಟ ಸಹಕಾರವನ್ನು ಮರೆಯುವಂತಿಲ್ಲ. 5 ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ ಎಂದರು.

ಅಂಬರೀಶ್ ಅವರು 25 ವರ್ಷ ಕಾಂಗ್ರೆಸ್ನಲ್ಲಿ ಇದ್ದವರು. ನಾನು ಪಾರ್ಲಿಮೆಂಟ್ಗೆ ಬಂದಾಗ ನನಗೆ ಮಾರ್ಗದರ್ಶನ ಕೊಟ್ಟವರು ಬಿಜೆಪಿ ನಾಯಕರು. ನನ್ನ ರಾಜಕೀಯದ ಪ್ರಭಾವಿ ನಾಯಕ ಮೋದಿ ಅವರು. ಮೋದಿ ಅವರ ಭಾಷಣ ಕೇಳಿದಾಗ ನನಗೆ ಹೆಚ್ಚು ಅನುಭವ ಆಗುತ್ತದೆ. ಇವೆಲ್ಲವನ್ನು ನೋಡಿ ಬಿಜೆಪಿ ಸೇರಬೇಕು ಎಂಬ ತೀರ್ಮಾನ ಮಾಡಿದೆ ಎಂದು ಹೇಳಿದರು.

ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನನ್ನನ್ನು ಕರೆದು ಜಿಲ್ಲೆಯ ಸಮಸ್ಯೆ ಕೇಳಿದರು. ಮೈ ಶುಗರ್ ಕಾರ್ಖಾನೆ ತೆರೆಯುವಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಪಾತ್ರ ದೊಡ್ಡದು. ಇಂದು ಅದರ ಕ್ರೆಡಿಟ್ ಯಾರ್ಯಾರೋ ತೆಗೆದುಕೊಳ್ಳುತ್ತಾರೆ. ಅದು ಸರಿಯಲ್ಲ, ಅದರ ಕ್ರೆಡಿಟ್ ಬಿಜೆಪಿದು ಎಂದರು.

ಪ್ರಧಾನಿ ಮೋದಿ ಅವರು ನುಡಿದಂತೆ ನಡೆಯುತ್ತಾರೆ, ಮೋದಿ ಅವರ ಕನಸಿಗೆ ನಾವೆಲ್ಲಾ ಕೈಜೋಡಿಸಬೇಕು. ನನಗೆ ನನ್ನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ, ನನ್ನ ಜಿಲ್ಲೆ, ರಾಜ್ಯ, ಬಿಜೆಪಿ ಮುಖ್ಯ. ಮುಂದಿನ ದಿನಗಳಲ್ಲಿ ಎಲ್ಲರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಲೋಕಸಭಾ ಚುವಾವಣೆ ಕೇವಲ ಮಂಡ್ಯ ಕ್ಷೇತ್ರದಲ್ಲಿ ಮಾತ್ರ ನಡೆಯುತ್ತಿಲ್ಲ ಎಂದು ನಗುತ್ತಾ ಹೇಳಿ, ಪಕ್ಷದ ವರಿಷ್ಠರು ಯಾವುದೇ ಕ್ಷೇತ್ರದಲ್ಲಿ ಪ್ರಚಾರ ಮಾಡುವಂತೆ ಹೇಳಿದರೂ ಅದನ್ನು ಮಾಡುತ್ತೇನೆ, ಬರೀ ಮಂಡ್ಯ ಮಾತ್ರವಲ್ಲ ಎಂದರು.

ಇನ್ನು ಮುಂದೆ ತಾನು ಪಕ್ಷದ ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗುತ್ತದೆ, ಅಲ್ಲಿ ಕಾರ್ಯಕರ್ತರು ಮತ್ತು ಮುಖಂಡರಿರುತ್ತಾರೆ, ಎಲ್ಲರೊಂದಿಗೆ ಜೊತೆಗೂಡಿ ಕೆಲಸ ಮಾಡುವುದಾಗಿ ಸುಮಲತಾ ಹೇಳಿದರು. ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ನಮ್ಮ ಸಂಕಲ್ಪ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂಬುದು.

ಎಲ್ಲರ ಅನುಭವ, ಜನಪ್ರಿಯತೆ, ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಅವರೆಲ್ಲರನ್ನು ಪಕ್ಷದಲ್ಲಿ ಜವಾಬ್ದಾರಿ ಕೊಟ್ಟು, ಒಳ್ಳೆಯ ರೀತಿ ನಡೆಸಿಕೊಳ್ಳುತ್ತೇವೆ. ಇವರೆಲ್ಲರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಹೇಳಿದರು.

RELATED ARTICLES

Latest News