Homeರಾಜ್ಯಕರ್ನಾಟಕದ 226 ಬರಪೀಡಿತ ತಾಲೂಕುಗಳಲ್ಲಿ 62,481ಕೋಟಿ ನಷ್ಟ

ಕರ್ನಾಟಕದ 226 ಬರಪೀಡಿತ ತಾಲೂಕುಗಳಲ್ಲಿ 62,481ಕೋಟಿ ನಷ್ಟ

ಬೆಂಗಳೂರು, ಅ.22- ಕರ್ನಾಟಕದ 226 ಬರಪೀಡಿತ ತಾಲೂಕುಗಳಿಂದು ಒಟ್ಟು 62,481.88 ಕೋಟಿ ರೂಪಾಯಿ ನಷ್ಟವಾ ಗಿದ್ದು, ಎನ್‌ ಡಿ ಆರ್‌ ಎಫ್‌ ನಿಯ ಮಾವಳಿ ಅನುಸಾರ 20,585.73 ಕೋಟಿ ಬರ ಪರಿಹಾರ ನೆರವು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ರಾಜ್ಯ ಸರ್ಕಾರ ಅಂತಿಮ ಪ್ರಸ್ತಾವನೆ ಸಲ್ಲಿಸಿದೆ.

ಕಂದಾಯ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚಹ್ವಾಣ್‌ ಅವರಿಗೆ ಆರು ಪುಟಗಳ ಸುದೀರ್ಘ ಪತ್ರ ಬರೆದಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಒಟ್ಟಾಗಿ ರೈತರ ನೆರವಿಗೆ ಧಾವಿಸಬೇಕಿದೆ ಎಂದು ಹೇಳಿದ್ದಾರೆ.

ರಾಜ್ಯದ ರೈತ ಸಮುದಾಯ ಎದುರಿಸುತ್ತಿರುವ ಗಂಭೀರ ಬರ ಪರಿಸ್ಥಿತಿಯನ್ನು ವಿವರಿಸಿರುವ ಅವರು, ಬೆಳೆ ನಷ್ಟ, ಕುಡಿಯುವ ನೀರಿನ ಕೊರತೆ, ಜಾನುವಾರುಗಳ ರಕ್ಷಣೆ ಹಾಗೂ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ತುರ್ತು ನೆರವು ಒದಗಿಸಲು ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

2026ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕವು ತೀವ್ರ ಮಳೆ ಕೊರತೆಯನ್ನು ಎದುರಿಸಿದೆ. ರಾಜ್ಯದಲ್ಲಿ ವಾಡಿಕೆಯಂತೆ 852 ಮಿಲಿಮೀಟರ್‌ ಮಳೆಯಾಗಬೇಕಿದ್ದರೂ, ಕೇವಲ 551 ಮಿಲಿಮೀಟರ್‌ ಮಳೆಯಾಗಿದೆ. ಇದರಿಂದ ಶೇ. 35ರಷ್ಟು ಮಳೆ ಕೊರತೆ ದಾಖಲಾಗಿದ್ದು, 1956ರ ನಂತರದ ಎರಡನೇ ಅತ್ಯಂತ ಕಡಿಮೆ ಮುಂಗಾರು ಮಳೆಯಾಗಿದೆ. ಮುಂಗಾರಿನ 122 ದಿನಗಳಲ್ಲಿ 79 ದಿನ ಮಳೆ ಕೊರತೆ ಅಥವಾ ತೀವ್ರ ಮಳೆ ಕೊರತೆ ಕಂಡುಬಂದಿದೆ.

ಕೇಂದ್ರದ ಅಂತರ್‌ ಸಚಿವಾಲಯ ತಂಡವು ಅಕ್ಟೋಬರ್‌ 3ರಿಂದ 6ರವರೆಗೆ ರಾಜ್ಯದ ಬರ ಪರಿಸ್ಥಿತಿಯನ್ನು ಪರಿಶೀಲಿಸಿದೆ. ಈ ಹಿಂದೆ ಅಕ್ಟೋಬರ್‌ 1ರಂದು 177 ಬರಪೀಡಿತ ತಾಲೂಕುಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ನೆರವು ಕೋರಿ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ನಂತರದ ಪರಿಶೀಲನೆಯ ಆಧಾರದಲ್ಲಿ ಹೆಚ್ಚುವರಿಯಾಗಿ 49 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ಒಟ್ಟು ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಒಟ್ಟು 57.93 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ 53.92 ಲಕ್ಷ ಹೆಕ್ಟೇರ್‌ ಕೃಷಿ ಬೆಳೆಗಳು ಹಾಗೂ 4.01 ಲಕ್ಷ ಹೆಕ್ಟೇರ್‌ ತೋಟಗಾರಿಕಾ ಬೆಳೆಗಳು ಸೇರಿವೆ. ಬೆಳೆ ಹಾನಿಯ ಪ್ರಮಾಣ ಶೇ. 33ರಿಂದ ಶೇ. 100ರವರೆಗೆ ಇದೆ. ಮೆಕ್ಕೆಜೋಳ, ತೊಗರಿ, ಹತ್ತಿ, ರಾಗಿ, ಕಬ್ಬು, ಹೆಸರು, ಸೋಯಾಬೀನ್‌ ಮತ್ತು ಭತ್ತ ಪ್ರಮುಖವಾಗಿ ಹಾನಿಗೊಳಗಾಗಿವೆ. ಈ ಬೆಳೆ ನಷ್ಟದಿಂದ ಕೃಷಿ ಕುಟುಂಬಗಳ ಆದಾಯ, ಆರ್ಥಿಕ ಭದ್ರತೆ ಹಾಗೂ ಮುಂದಿನ ಬಿತ್ತನೆಗೆ ಅಗತ್ಯವಾದ ಬಂಡವಾಳದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಬೆಳೆ ಹಾನಿ, ಕುಡಿಯುವ ನೀರು, ಪಶುಸಂಗೋಪನೆ ಮತ್ತು ಸಣ್ಣ ಹಾಗೂ ಅತಿಸಣ್ಣ ರೈತರಿಗೆ ತಕ್ಷಣದ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಒಟ್ಟು 20,585.73 ಕೋಟಿ ರೂ.ಗಳ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಪೈಕಿ ಬೆಳೆ ನಷ್ಟದ ಇನ್‌ ಪುಟ್‌ ಸಬ್ಸಿಡಿಗಾಗಿ 6,128.70 ಕೋಟಿ, ಕುಡಿಯುವ ನೀರು ಪೂರೈಕೆಗಾಗಿ 1,727 ಕೋಟಿ, ಪಶುಸಂಗೋಪನೆ ಮತ್ತು ಜಾನುವಾರು ರಕ್ಷಣೆಗಾಗಿ 583.04 ಕೋಟಿ ಹಾಗೂ 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತುರ್ತು ಪರಿಹಾರವಾಗಿ 12,146.99 ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.

ಸಣ್ಣ ಮತ್ತು ಅತಿಸಣ್ಣ ರೈತರಿಗೆ ದಿನಕ್ಕೆ 327ರಂತೆ 60 ದಿನಗಳ ಅವಧಿಗೆ ನೆರವು ಲೆಕ್ಕಹಾಕಲಾಗಿದೆ. ಈ ನೆರವು ರೈತ ಕುಟುಂಬಗಳ ಮೂಲಭೂತ ಅಗತ್ಯಗಳನ್ನು ಪೂರೈಸಲು ಹಾಗೂ ಬೆಳೆ ನಷ್ಟದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅತ್ಯಗತ್ಯವಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆ ಮತ್ತು ನೀರು ಪೂರೈಕೆ ಯೋಜನೆಗಳ ದುರಸ್ತಿಗಾಗಿ 1,727 ಕೋಟಿ ಕೋರಲಾಗಿದೆ. ಇದರಲ್ಲಿ ಗ್ರಾಮೀಣ ಪ್ರದೇಶಗಳಿಗೆ 1,130 ಕೋಟಿ ಹಾಗೂ ನಗರ ಪ್ರದೇಶಗಳಿಗೆ 597 ಕೋಟಿ ಸೇರಿವೆ. ಜಾನುವಾರುಗಳ ರಕ್ಷಣೆಗಾಗಿ 476 ಗೋಶಾಲೆಗಳು ಮತ್ತು 583 ಮೇವು ಬ್ಯಾಂಕ್‌ ಗಳನ್ನು ಸ್ಥಾಪಿಸುವುದು ಸೇರಿದಂತೆ ಅಗತ್ಯ ಕ್ರಮಗಳಿಗೆ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ.

ರೈತರಿಗೆ ಪರಿಹಾರ ಲೆಕ್ಕಾಚಾರ ಮಾಡುವ ಪ್ರಸ್ತುತ ವ್ಯವಸ್ಥೆಯಲ್ಲಿರುವ ಸಮಸ್ಯೆಯನ್ನೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಕೃಷಿ ಗಣತಿಯ ಹೊಸ ಅಂಕಿಅಂಶಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ 2015-16ರ ಕೃಷಿ ಗಣತಿಯನ್ನೇ ಆಧಾರವಾಗಿ ಬಳಸಲಾಗುತ್ತಿದೆ. ಇದರಿಂದ ಅರ್ಹ ರೈತರಿಗೆ ನೀಡಬೇಕಾದ ಪರಿಹಾರದ ಲೆಕ್ಕಾಚಾರದಲ್ಲಿ ಸುಮಾರು 1,669.50 ಕೋಟಿ ಕೊರತೆಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ರೈತರ ವಿವರಗಳನ್ನು ಒಳಗೊಂಡಿರುವ ಎಫ್‌ ಆರ್‌ ಯು ಐ ಟಿ ಎಸ್‌‍ ದತ್ತಾಂಶ ವ್ಯವಸ್ಥೆಯನ್ನು ಬಳಸಿಕೊಂಡು ಫಲಾನುಭವಿಗಳ ಅರ್ಹತೆ ಮತ್ತು ಬೆಳೆ ಪರಿಹಾರದ ಮೊತ್ತವನ್ನು ನಿರ್ಧರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.

ಬರದಿಂದ ಮಕ್ಕಳ ಪೌಷ್ಟಿಕಾಂಶ, ಶಿಕ್ಷಣ ಮತ್ತು ದುರ್ಬಲ ಕುಟುಂಬಗಳ ಜೀವನೋಪಾಯದ ಮೇಲೂ ಪರಿಣಾಮ ಉಂಟಾಗುವುದರಿಂದ, ಬರಪೀಡಿತ ತಾಲೂಕುಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿಯೂ ಪೌಷ್ಟಿಕ ಆಹಾರ ಒದಗಿಸಲು ಪಿಎಂ ಪೋಷಣ್‌ ಯೋಜನೆಯಡಿ ಹೆಚ್ಚುವರಿಯಾಗಿ 427.20 ಕೋಟಿ ರೂ. ಹಾಗೂ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ 70.96 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.

ಕೃಷಿ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ನೀಡುವ ಪರಿಹಾರದ ಪ್ರಸ್ತುತ ಮಾನದಂಡಗಳನ್ನು 16ನೇ ಹಣಕಾಸು ಆಯೋಗದ ಅವಧಿಗೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದೂ ಪತ್ರದಲ್ಲಿ ಒತ್ತಾಯಿಸಲಾಗಿದೆ.ಕರ್ನಾಟಕದ ರೈತರು ದೇಶದ ಆಹಾರ ಭದ್ರತೆ ಮತ್ತು ಕೃಷಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ಒಕ್ಕೂಟ ವ್ಯವಸ್ಥೆಯ ಆಶಯದಡಿ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿಗಳು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ಬರ ಪರಿಹಾರ ಮನವಿಯ ಪರಿಶೀಲನೆಯನ್ನು ತ್ವರಿತಗೊಳಿಸಬೇಕು, ಕೇಂದ್ರದ ಅಂತರ್‌ ಸಚಿವಾಲಯ ತಂಡದ ಶಿಫಾರಸುಗಳನ್ನು ಉನ್ನತ ಮಟ್ಟದ ಸಮಿತಿಗೆ ಶೀಘ್ರ ಸಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಅಗತ್ಯ ಅನುದಾನವನ್ನು ಆದಷ್ಟು ಬೇಗ ಮಂಜೂರು ಮಾಡಿ ಬಿಡುಗಡೆ ಮಾಡಬೇಕು ಎಂದು ಡಾ. ಜಿ. ಪರಮೇಶ್ವರ್‌ ಪತ್ರದಲ್ಲಿ ಆಗ್ರಹಿಸಿದ್ದಾರೆ.

RELATED ARTICLES
spot_img

Latest News