Homeಅಂತಾರಾಷ್ಟ್ರೀಯಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ : ಕನಿಷ್ಠ 16 ಮಂದಿ ಸಾವು, ಕುಸಿದ ನೂರಾರು ಮನೆಗಳು

ಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ : ಕನಿಷ್ಠ 16 ಮಂದಿ ಸಾವು, ಕುಸಿದ ನೂರಾರು ಮನೆಗಳು

ಲಾಸಾ,ಅ.23- ಚೀನಾದ ಟಿಬೆಟ್‌ ಸ್ವಾಯತ್ತ ಪ್ರದೇಶದಲ್ಲಿ ಗುರುವಾರ ರಾತ್ರಿ ಸಂಭವಿಸಿದ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 46 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 11 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಭೂಕಂಪದಿಂದ 339 ಮನೆಗಳು ಕುಸಿದಿದ್ದು, ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

ಭೂಮಿ ಕಂಪಿಸಿದ ಪರಿಣಾಮ ಜನರು ರೆಸ್ಟೋರೆಂಟ್‌ಗಳು, ಅಂಗಡಿಗಳು ಮತ್ತು ಸೂಪರ್‌ ಮಾರ್ಕೆಟ್‌ಗಳಿಂದ ಭಯಭೀತರಾಗಿ ಹೊರಗೆ ಓಡಿಬಂದರು. ಕಟ್ಟಡಗಳು ನಡುಗಿದ್ದರಿಂದ ಸೂಪರ್‌ ಮಾರ್ಕೆಟ್‌ಗಳ ಕಪಾಟಿನಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಿವೆ. ಭೂಕಂಪದಿಂದ ಉಂಟಾಗಿರುವ ಒಟ್ಟಾರೆ ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಇನ್ನೂ ಅಂದಾಜಿಸುತ್ತಿದ್ದಾರೆ.

ನಾಗ್‌್ಕ ಪ್ರದೇಶದ ಸಮೀಪ ಭೂಕಂಪದ ಕೇಂದ್ರಬಿಂದು :
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಭೂಕಂಪದ ಕೇಂದ್ರಬಿಂದು ನಾಗ್‌್ಕ ಪ್ರದೇಶದ ಪೂರ್ವ-ಈಶಾನ್ಯಕ್ಕೆ ಸುಮಾರು 190 ಕಿಲೋಮೀಟರ್‌ ಹಾಗೂ ಟಿಬೆಟ್‌ನ ಪ್ರಾದೇಶಿಕ ರಾಜಧಾನಿ ಲಾಸಾದಿಂದ ಈಶಾನ್ಯಕ್ಕೆ ಸುಮಾರು 390 ಕಿಲೋಮೀಟರ್‌ ದೂರದ ಪರ್ವತ ಪ್ರದೇಶದಲ್ಲಿತ್ತು. ಗುರುವಾರ ರಾತ್ರಿ 10.33ರ ಸುಮಾರಿಗೆ ಭೂಮಿಯ ಸುಮಾರು 10 ಕಿಲೋಮೀಟರ್‌ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ವರದಿಯಾಗಿದೆ.

ಬಕೆನ್‌ ಕೌಂಟಿಯ ಮಾರು ಪಟ್ಟಣದ ಸಮೀಪ ಭೂಕಂಪದ ಕೇಂದ್ರಬಿಂದು ಇತ್ತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ತೀವ್ರತೆಯಿಂದ ಪಟ್ಟಣದ ಕಚೇರಿಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಕೌಂಟಿ ಕೇಂದ್ರದಲ್ಲಿ ವಿದ್ಯುತ್‌ ಮತ್ತು ದೂರಸಂಪರ್ಕ ಸೇವೆಗಳಿಗೂ ಅಡಚಣೆ ಉಂಟಾಗಿದೆ.

ನೂರಾರು ರಕ್ಷಣಾ ಸಿಬ್ಬಂದಿ ನಿಯೋಜನೆ :
ಭೂಕಂಪ ಪೀಡಿತ ಪ್ರದೇಶದಲ್ಲಿ ಚೀನಾ ಅಧಿಕಾರಿಗಳು ಮೂರನೇ ಹಂತದ (ಲೆವೆಲ್‌‍-ಐಐಐ) ಭೂಕಂಪ ವಿಪತ್ತು ತುರ್ತು ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಿದ್ದಾರೆ. ಪರಿಹಾರ ಕಾರ್ಯಗಳಿಗೆ ನೆರವಾಗಲು 300ಕ್ಕೂ ಹೆಚ್ಚು ಪೊಲೀಸ್‌‍ ಅಧಿಕಾರಿಗಳನ್ನು ಹಾಗೂ ಪ್ರಾದೇಶಿಕ ಅಗ್ನಿಶಾಮಕ ಮತ್ತು ರಕ್ಷಣಾ ಪಡೆಗಳ 347 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ರಕ್ಷಣಾ ಕಾರ್ಯಕರ್ತರು ಹಾನಿಗೊಳಗಾದ ಕಟ್ಟಡಗಳಲ್ಲಿ ಸಿಲುಕಿರುವವರಿಗಾಗಿ ಶೋಧ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದ್ದು, ಮನೆಗಳನ್ನು ಕಳೆದುಕೊಂಡ ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಡೇರೆಗಳನ್ನು ಸ್ಥಾಪಿಸಲಾಗುತ್ತಿದೆ. ಹಾನಿಗೊಳಗಾದ ಕಟ್ಟಡಗಳ ಸ್ಥಿತಿಯನ್ನು ಪರಿಶೀಲಿಸುವುದರ ಜೊತೆಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಪೀಡಿತ ಪ್ರದೇಶಗಳಿಗೆ ತಲುಪಿಸುವ ಕಾರ್ಯವೂ ನಡೆಯುತ್ತಿದೆ.

ಕಳೆದ ಐದು ವರ್ಷಗಳಲ್ಲಿ ಟಿಬೆಟ್‌ ಪ್ರದೇಶವನ್ನು ಅಪ್ಪಳಿಸಿದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ ಎಂದು ವರದಿಗಳು ತಿಳಿಸಿವೆ. ಪರ್ವತ ಪ್ರದೇಶವಾಗಿರುವ ಟಿಬೆಟ್‌ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳು ಭೂಕಂಪದ ಅಪಾಯಕ್ಕೆ ಒಳಪಟ್ಟಿವೆ. ಈ ಭಾಗದಲ್ಲಿ ಸಂಭವಿಸುವ ಪ್ರಬಲ ಕಂಪನಗಳು ಕಟ್ಟಡಗಳ ಕುಸಿತ, ರಸ್ತೆ ಸಂಪರ್ಕ ಕಡಿತ ಮತ್ತು ದೂರದ ಪ್ರದೇಶಗಳಿಗೆ ಪರಿಹಾರ ತಲುಪಿಸುವಲ್ಲಿನ ಸವಾಲುಗಳನ್ನು ಹೆಚ್ಚಿಸುತ್ತವೆ.

ಚೀನಾದಲ್ಲಿ ಹಿಂದೆಯೂ ಸಂಭವಿಸಿದ್ದ ಭೀಕರ ಭೂಕಂಪಗಳು :
ಚೀನಾ ಈ ಹಿಂದೆಯೂ ಹಲವು ವಿನಾಶಕಾರಿ ಭೂಕಂಪಗಳನ್ನು ಎದುರಿಸಿದೆ. 2025ರ ಜನವರಿಯಲ್ಲಿ ಟಿಬೆಟ್‌ನ ಟಿಂಗ್ರಿ ಕೌಂಟಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 126 ಮಂದಿ ಮೃತಪಟ್ಟಿದ್ದರು. 2023ರ ಡಿಸೆಂಬರ್‌ನಲ್ಲಿ ವಾಯುವ್ಯಚೀನಾದ ಗನ್ಸುಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 127 ಜನರು ಸಾವನ್ನಪ್ಪಿದ್ದರು ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿದ್ದವು.

2008ರಲ್ಲಿ ಸಿಚುವಾನ್‌ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 90,000 ಮಂದಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ಅಂದಾಜಿಸಲಾಗಿತ್ತು. 2014ರಲ್ಲಿ ಯುನ್ನಾನ್‌ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿಯೂ 600ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಪ್ರಸ್ತುತ ಟಿಬೆಟ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತು ಆಸ್ತಿಪಾಸ್ತಿಯ ನಷ್ಟದ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಹಾನಿಗೊಳಗಾದ ಕಟ್ಟಡಗಳಲ್ಲಿ ಸಿಲುಕಿರುವವರ ಶೋಧ, ಗಾಯಾಳುಗಳಿಗೆ ಚಿಕಿತ್ಸೆಹಾಗೂ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ಒದಗಿಸುವುದು ಅಧಿಕಾರಿಗಳ ಪ್ರಮುಖ ಆದ್ಯತೆಯಾಗಿದೆ.

RELATED ARTICLES
spot_img

Latest News