Friday, April 11, 2025
Homeರಾಷ್ಟ್ರೀಯ | Nationalಇನ್ನೊಂದು ವಾರದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ : ರಾಜನಾಥ್ ಸಿಂಗ್

ಇನ್ನೊಂದು ವಾರದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ : ರಾಜನಾಥ್ ಸಿಂಗ್

ನವದೆಹಲಿ,ಏ.6- ಇನ್ನೊಂದು ವಾರದಲ್ಲಿ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ. ಸುದ್ದಿ ವಾಹಿನಿವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಇನ್ನು ಏಳೆಂಟು ದಿನದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದೆ.

ಈಗಾಗಲೇ ಬಹುತೇಕ ಕೆಲಸ ಮುಗಿದಿದ್ದು ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ. ಅಲ್ಲದೇ ಪ್ರಣಾಳಿಕೆ ಜಾರಿಗೆ ಯೋಗ್ಯವಾಗಿರಬೇಕು, ಭರವಸೆ ನೀಡಿದ ಮೇಲೆ ಈಡೇರಿಸುವಂತಿರಬೇಕು. ಆ ದೃಷ್ಟಿಕೋನದಲ್ಲಿ ನಾವು ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪ್ರಣಾಳಿಕೆಯಲ್ಲಿ ಏನೆಲ್ಲ ಅಂಶಗಳಿದೆ ಎನ್ನುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ಸಣ್ಣದಾದ ಸುಳಿವು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಒಂದು ದೇಶ, ಒಂದು ಚುನಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಣಾಳಿಕೆಯಲ್ಲಿ ಏನಿದೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ.

ಒಂದು ದೇಶ ಒಂದು ಚುನಾವಣೆ ನಡೆಯಬೇಕು ಎನ್ನುವುದು ಎಲ್ಲರ ಅಭಿಪ್ರಾಯ. ಬಹಳಷ್ಟು ಜನರ ಇದರ ಪರವಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರಣಾಳಿಕೆಯಲ್ಲಿ ಒಂದು ದೇಶ ಒಂದು ಚುನಾವಣೆ ಉಲ್ಲೇಖವಿರುವ ಸುಳಿವು ನೀಡಿದ್ದಾರೆ.

ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವುದು, ವಿಶ್ವದ ಮೂರನೇ ಬಲಿಷ್ಠ ಆರ್ಥಿಕತೆಯನ್ನಾಗಿ ಮಾಡುವುದು, ಮೂಲ ಸೌಕರ್ಯಗಳ ಅಭಿವೃದ್ದಿಗೆ ಇನ್ನಷ್ಟು ಒತ್ತು ಸೇರಿ ಹಲವು ಗ್ಯಾರಂಟಿಯನ್ನು ಪ್ರಧಾನಿ ನರೇಂದ್ರಮೋದಿ ಕೊಡಬಹುದು ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ದೇಶದ ಜನರ ಮುಂದೆ ಇಟ್ಟಿದ್ದು ಭರಪೂರ ಕೊಡುಗೆಗಳನ್ನು ಘೋಷಣೆ ಮಾಡಿದೆ. ಈ ನಡುವೆ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಯಾವಾಗ ಎಂಬ ಕುತೂಹಲ ಹೆಚ್ಚಿದೆ.

RELATED ARTICLES

Latest News