ಚಿತ್ರದುರ್ಗ,ಡಿ.20- ಸರ್ಕಾರಿ ಜಾಗ, ದಲಿತರ ಭೂಮಿ ಕಬಳಕೆ ಮಾಡುತ್ತಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅಕ್ರಮ ಆಸ್ತಿ ಕುರಿತು ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಚಿವ ಹೆಚ್.ಆಂಜನೇಯ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳಲ್ಕೆರೆಯಲ್ಲಿ ಈ ಹಿಂದೆ ಸತ್ತವರ ಆಸ್ತಿ ಕಬಳಿಸಲು ನಡೆಸಿದ್ದ ಪ್ರಯತ್ನವನ್ನು ಬಹಿರಂಗಗೊಳಿಸುತ್ತಿದ್ದಂತೆ ಕದ್ದುಮುಚ್ಚಿ ಹೋಗಿ ಅವರಿಗೆ ಆಸ್ತಿಯನ್ನು ಮರು ನೋಂದಣಿ ಮಾಡಿಸಿಕೊಟ್ಟಿದ್ದ ಚಂದ್ರಪ್ಪ, ಈಗ ದಲಿತರ ಭೂಮಿ ಮೇಲೆ ಕೆಂಗಣ್ಣು ಹಾಕಿದ್ದಾರೆ ಎಂದು ದೂರಿದರು.
ಕ್ಷೇತ್ರದಲ್ಲಿ ದಲಿತರ ಭೂಮಿಯನ್ನು ಬೇರೊಬ್ಬರ ಹೆಸರಿಗೆ ಮಾಡಿಸಿ, ಅದನ್ನು ತನ್ನ ಕುಟುಂಬದ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವ ಷಡ್ಯಂತರ ನಿರಂತವಾಗಿ ನಡೆಯುತ್ತಿದೆ. ಈ ಕಾರ್ಯಕ್ಕೆ ಜಿಲ್ಲಾ, ತಾಲ್ಲೂಕು ಆಡಳಿತ ಬೆಂಬಲವಾಗಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಸಿ ಮೀಸಲಾತಿ ಸೌಲಭ್ಯದಡಿ ಜನಪ್ರತಿನಿಧಿ ಆಗಿರುವ, ಅನೇಕ ಸೌಲಭ್ಯ ಪಡೆದಿರುವ ಚಂದ್ರಪ್ಪ, ದಲಿತರ ಭೂಮಿ ಖರೀದಿಸಬಾರೆಂಬ ಸಾಮಾನ್ಯ ಪ್ರಜ್ಞೆ ಇಲ್ಲ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಅನೇಕ ಬಡ, ದಲಿತರ ಭೂಮಿಯನ್ನು ತನ್ನ ಕುಟುಂಬದ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದು ದೂರಿದರು.
12 ಎಕರೆ ದಲಿತರ ಭೂಮಿಯನ್ನು ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡಿರುವ ಚಂದ್ರಪ್ಪ ಕುಟುಂಬ, ಈಗ ಈ ಜಮೀನು ಪಕ್ಕದಲ್ಲಿರುವ 218 ಎಕರೆ ವಿಸ್ತೀರ್ಣದ ಬಹುದೊಡ್ಡ ಸರ್ಕಾರಿ ಗುಡ್ಡವನ್ನೇ ಕಬಳಿಸಲು ಮುಂದಾಗಿದೆ. ಈ ಗುಡ್ಡ ಖನಿಜ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿದ್ದು, ಈಗಾಗಲೇ ಈ ಪ್ರದೇಶದಲ್ಲಿ ಅಕ್ರಮವಾಗಿ ಮನೆ ಕಟ್ಟಲಾಗಿದೆ. ಜೊತೆಗೆ ಗುಡ್ಡವನ್ನೇ ಕರಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಶಾಸಕ ಚಂದ್ರಪ್ಪ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಡ, ದಲಿತರ ಭೂ ಹಕ್ಕು ಕಸಿದುಕೊಳ್ಳುತ್ತಿದ್ದಾರೆ. ಈ ಸಂಬಂಧ ಈಗಾಗಲೇ ದಾಖಲೆ ಸಮೇತ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಶಾಸಕ ಚಂದ್ರಪ್ಪ ಅಕ್ರಮವಾಗಿ ಸಂಪಾದಿಸಿರುವ ನಿವೇಶನ, ಜಮೀನನ್ನು ಎಸ್ಸಿ, ಎಸ್ಟಿ ಸಮುದಾಯಕ್ಕೆ ವಾಪಸ್ಸು ಕೊಡಿಸಲು ಆಡಳಿತ ವರ್ಗ ಮುಂದಾಗಬೇಕು. ಮೂಲ ವಾರಸುದಾರರಿಗೆ ಭೂಮಿ ಹಿಂತಿರುಗಿಸಬೇಕು. ಇಲ್ಲದಿದ್ದರೇ ಅಧಿಕಾರಿ ವರ್ಗದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
