Homeರಾಜ್ಯಎಸ್‌‍ಎಸ್‌‍ಎಲ್‌ಸಿ-ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬದಲು ಸಾಧ್ಯತೆ

ಎಸ್‌‍ಎಸ್‌‍ಎಲ್‌ಸಿ-ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬದಲು ಸಾಧ್ಯತೆ

ಬೆಂಗಳೂರು,ಅ.23- ಕೇಂದ್ರ ಸರ್ಕಾರದ ಜನಗಣತಿ ಕಾರ್ಯದ ಹಿನ್ನೆಲೆಯಲ್ಲಿ ಕರ್ನಾಟಕದ ಎಸ್‌‍ಎಸ್‌‍ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಯಾಗುವ ಸಾಧ್ಯತೆ ಇದೆ.ಫೆಬ್ರವರಿ-ಮಾರ್ಚ್‌ ಅವಧಿಯಲ್ಲಿ ನಡೆಯಲಿರುವ ಪರೀಕ್ಷೆಗಳನ್ನು ಮುಂದೂಡುವಂತೆ ಕೇಂದ್ರ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯವು ರಾಜ್ಯದ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ. ಆದರೆ, ಪರೀಕ್ಷೆಗಳ ಮುಂದೂಡಿಕೆ ಕುರಿತು ರಾಜ್ಯ ಸರ್ಕಾರ ಅಥವಾ ಪರೀಕ್ಷಾ ಮಂಡಳಿಯಿಂದ ಅಧಿಕೃತ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.

ಕೇಂದ್ರದ ಜನಗಣತಿ ಕಾರ್ಯದ ಎರಡನೇ ಹಂತವು 2027ರ ಜನವರಿ 25ರಿಂದ ಫೆಬ್ರವರಿ 28ರವರೆಗೆ ನಡೆಯಲಿದ್ದು, ಮಾರ್ಚ್‌ 1ರಿಂದ 5ರವರೆಗೆ ಪರಿಷ್ಕರಣಾ ಕಾರ್ಯ ಕೈಗೊಳ್ಳುವ ಉದ್ದೇಶವಿದೆ. ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಬಹುದು. ಇದರಿಂದ ಪರೀಕ್ಷೆಗಳ ಸಿದ್ಧತೆ, ಸಿಬ್ಬಂದಿಯ ನಿಯೋಜನೆ ಮತ್ತು ಪರೀಕ್ಷಾ ಕೇಂದ್ರಗಳ ನಿರ್ವಹಣೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆಯನ್ನು ಪರಿಗಣಿಸಿ ವೇಳಾಪಟ್ಟಿ ಬದಲಾವಣೆಗೆ ಮನವಿ ಮಾಡಲಾಗಿದೆ.

ಜನಗಣತಿ ಕಾರ್ಯ ಮತ್ತು ಪರೀಕ್ಷೆಗಳ ಸಿದ್ಧತೆ ಒಂದೇ ಅವಧಿಯಲ್ಲಿ ಎದುರಾಗುವ ಸಾಧ್ಯತೆಯಿಂದಾಗಿ ವೇಳಾಪಟ್ಟಿ ಬದಲಾವಣೆಯ ಚರ್ಚೆ ಆರಂಭವಾಗಿದೆ. ಪರೀಕ್ಷೆಗಳ ದಿನಾಂಕ ಬದಲಾದರೆ ವಿದ್ಯಾರ್ಥಿಗಳ ಓದಿನ ಯೋಜನೆ, ಪ್ರವೇಶ ಪ್ರಕ್ರಿಯೆಗಳು ಹಾಗೂ ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಹಿಂದೆ ಕರ್ನಾಟಕದಲ್ಲಿ ಎಸ್‌‍ಎಸ್‌‍ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಹಂತ ಹಂತವಾಗಿ ನಡೆಸುವುದು, ಮರುಪರೀಕ್ಷೆಗಳಿಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಪರೀಕ್ಷಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಪರೀಕ್ಷಾ ವೇಳಾಪಟ್ಟಿಯ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಗಮನ ಹರಿಸಿದ್ದಾರೆ.

ಜನಗಣತಿ ಕಾರ್ಯದ ಅಗತ್ಯತೆ ಮತ್ತು ಪರೀಕ್ಷೆಗಳ ಸುಗಮ ನಿರ್ವಹಣೆಯನ್ನು ಸಮನ್ವಯಗೊಳಿಸುವ ಉದ್ದೇಶದಿಂದ ವೇಳಾಪಟ್ಟಿ ಬದಲಾವಣೆಗೆ ಮನವಿ ಮಾಡಲಾಗಿದೆ. ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಈ ಕುರಿತು ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡ ಬಳಿಕವೇ ಹೊಸ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.

ಜನಗಣತಿ ಕಾರ್ಯದ ಹಿನ್ನೆಲೆಯಲ್ಲಿ 2027ರ ಎಸ್‌‍ಎಸ್‌‍ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ದಿನಾಂಕ ಬದಲಾಗುವ ಸಾಧ್ಯತೆ ಚರ್ಚೆಯಲ್ಲಿದ್ದರೂ, ಅಧಿಕೃತ ಆದೇಶ ಹೊರಬೀಳುವವರೆಗೆ ಪರೀಕ್ಷೆಗಳ ಮುಂದೂಡಿಕೆ ಖಚಿತವಾಗಿಲ್ಲ.ಪ್ರಸ್ತುತ ಜನಗಣತಿ ಕರ್ತವ್ಯಕ್ಕೆ ಶಿಕ್ಷಕರೇ ಪ್ರಮುಖ ಆಧಾರವಾಗಿರುವುದರಿಂದ, ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಗೆ ಯಾವುದೇ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಇಲಾಖೆ ಚಿಂತನೆ ನಡೆಸಿದೆ.

ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಹೊಸ ಅಧಿಕೃತ ಪ್ರಕಟಣೆಗಾಗಿ ಎದುರು ನೋಡುತ್ತಿದ್ದಾರೆ.

ಬೋರ್ಡ್‌ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿ:
ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ 1- 2027 ಮಾರ್ಚ್‌ 22 ರಿಂದ ಏಪ್ರಿಲ್‌ 5ರವರೆಗೆ ಪರೀಕ್ಷೆ.
ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ 2-2027 ಮೇ 24 ರಿಂದ ಮೇ 31ರವರೆಗೆ ಪರೀಕ್ಷೆ.
2 ನೇ ಪಿಯುಸಿ ಪರೀಕ್ಷೆ 1- 2027 ಫೆಬ್ರವರಿ 27 ರಿಂದ ಮಾರ್ಚ್‌ 17.
2ನೇ ಪಿಯುಸಿ ಪರೀಕ್ಷೆ 2- 2027 ಮೇ 3 ರಿಂದ ಮೇ 15.

RELATED ARTICLES
spot_img

Latest News