ಬೆಂಗಳೂರು,ಅ.23- ರಾಜಕೀಯ ಲಾಭಕ್ಕಾಗಿ ಜೆಡಿಎಸ್ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸಂಚು ರೂಪಿಸಿದೆ ಎಂದು ಆರೋಪಿಸಿ ಮುಖ್ಯಮಂತ್ರಿ, ಗೃಹಮಂತ್ರಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ವರದಿ ಒಪ್ಪಿಸಿ ಬಂದಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರಲು ಸ್ಟಿಂಗ್ ಆಪರೇಷನ್ ಮಾಡಿರುವುದು ನಮ ಪಕ್ಷದವರೇ ಎಂದು ಹೇಳಿದ್ದಾರೆ.ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿಯನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಇನ್ನೇನು ಆಧಾರ ಬೇಕು? ಎಂದು ಪ್ರಶ್ನಿಸಿದರು.
ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಒಪ್ಪಿಕೊಂಡ ವ್ಯಕ್ತಿ ರಾಜಾರೋಷವಾಗಿ ಓಡಾಡಲು ಬಿಟ್ಟಿದ್ದಾರೆ. ಮೊನ್ನೆ ರಾತ್ರಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಇದ್ದ ಸ್ಟಿಂಗ್ ಆಪರೇಷನ್ ಆರೋಪವನ್ನು ಹೊತ್ತಿರುವ ವ್ಯಕ್ತಿಯನ್ನು ಕರೆದುಕೊಂಡು ಬಂದು ಕಾಟಾಚಾರಕ್ಕೆ ನೋಟಿಸ್ ನೀಡಿದ್ದಾರೆ. ಐಎಂಎ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಹಿಲೋರಿ ನೇಮಕ ಮಾಡಿಕೊಂಡಿದ್ದ ವಕೀಲರು ಮತ್ತು ಸ್ಟಿಂಗ್ ಆಪರೇಷನ್ನ ಆರೋಪಿ ನಿರೀಕ್ಷಣಾ ಜಾಮೀನು ಪಡೆಯಲು ನೇಮಕ ಮಾಡಿಕೊಂಡಿರುವ ವಕೀಲರು ಒಬ್ಬರೇ ಆಗಿದ್ದಾರೆ. ನನ್ನನ್ನು ಯಾರೂ ಟಚ್ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದ ವ್ಯಕ್ತಿ ಏಕೆ ಜಾಮೀನಿಗಾಗಿ ಅರ್ಜಿ ಹಾಕಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸ್ಟಿಂಗ್ ಆಪರೇಷನ್ ಆರೋಪಿ ಜೊತೆ ಕೆಲಸ ಮಾಡುತ್ತಿದ್ದ ವಿಕ್ಕಿ ಎಂಬ ವ್ಯಕ್ತಿ ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ಈಗಿನ ಮುಖ್ಯಮಂತ್ರಿ ಯುಡಿಆರ್ ಕೇಸು ಮಾಡುವಂತೆ ಮಾಡಿ ಆ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿದರು.
ಸರ್ಕಾರವೇ ಆ ವ್ಯಕ್ತಿ ಪರವಾಗಿದ್ದು, ನಿಷ್ಟಕ್ಷಪಾತ ತನಿಖೆ ನಡೆಯುವ ಬಗ್ಗೆ ಅನುಮಾನವಿದೆ.
ಕಾಂಗ್ರೆಸ್ ಪಕ್ಷವನ್ನು ಉಳಿಸಿದಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಹಾಳು ಮಾಡಿ ಕಾಂಗ್ರೆಸ್ ಮುಗಿಸಲು ಹೊರಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಅನಿವಾರ್ಯವಾದರೆ ಸಿದ್ದರಾಮಯ್ಯ ಭೇಟಿ :
ನೀವು ಮುಖ್ಯಮಂತ್ರಿಯಾಗುವುದರಲ್ಲಿ ಸಿದ್ದರಾಮಯ್ಯ ಅವರ ಪಾಲು ಇದೆ ಎಂದ ಅವರು, ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಅಗತ್ಯವಿಲ್ಲ. ಅನಿವಾರ್ಯವಾದರೆ ಮುಂದಿನ ದಿನಗಳಲ್ಲಿ ಭೇಟಿ ಮಾಡಲಾಗುವುದು. ನಮ ಪಕ್ಷದಲ್ಲಿ ಇದ್ದವರು ಮಾಜಿ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತಂದಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಅವರ ನೆರಳಲ್ಲೇ ಬೆಳೆದ ಯಾವೊಬ್ಬ ಕಾಂಗ್ರೆಸ್ ನಾಯಕರೂ ಚಕಾರವೆತ್ತುತ್ತಿಲ್ಲ. ಇನ್ನೆಷ್ಟು ದಿನ ಮೌನವಾಗಿರುತ್ತೀರಿ?, ಕಾಂಗ್ರೆಸ್ನ ಸಚಿವರು, ಶಾಸಕರು ಈ ವಿಚಾರದಲ್ಲಿ ಮೌನವಿದ್ದು ಹೊರಬರದಿದ್ದರೆ ಶಾಶ್ವತವಾಗಿ ಮೌನಕ್ಕೆ ಶರಣಾಗಬೇಕಾಗುತ್ತದೆ ಎಂದ ಅವರು, ಪ್ರಿಯಾಂಕ್ ಖರ್ಗೆಯವರಂತೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಗೃಹಸಚಿವರನ್ನು ಇದುವರೆಗೂ ನೋಡಿರಲಿಲ್ಲ ಎಂದು ವ್ಯಂಗ್ಯವಾಡಿದರು.
ವಿಜಯದಶಮಿಯ ನಂತರ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದ್ದರ ಬಗ್ಗೆ ಗಮನ ಸೆಳೆದಾಗ ಈಗ ನಡೆಯುತ್ತಿರುವುದನ್ನೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಉರುಳಿಬಿದ್ದರೆ ಏನು ಮಾಡುವುದು ಎಂದು ವ್ಯಂಗ್ಯವಾಡಿದರು.
ಕೆಪಿಎಸ್ಸಿ ಅಕ್ರಮ ನೇಮಕಾತಿ ಆರೋಪದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಫಿಕ್್ಸ ಮಾಡಲು ಕುಮಾರಸ್ವಾಮಿ ಹೊರಟಿದ್ದಾರೆ ಎಂದು ಆರೋಪಿಸಿರುವುದರಲ್ಲಿ ಉರುಳಿಲ್ಲ. ಬಿಡದಿ ಉಪನಗರ ಯೋಜನೆ ಹಾಗೂ ಬಿಎಂಐಸಿ ಯೋಜನೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ. ಯಾವುದೇ ವ್ಯಕ್ತಿ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಎಚ್.ಎಂ.ರಮೇಶ್ಗೌಡ, ಕೆ.ಎ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
