ಮುಂಬೈ,ಅ.23- ಬಾಲಿವುಡ್ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ತಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವಿಶ್ರಾಂತಿ ಮತ್ತು ಚೇತರಿಕೆಗೆ ಕೆಲ ದಿನಗಳ ವಿರಾಮ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ತಮ್ಮ ಅಭಿಮಾನಿಗಳೊಂದಿಗೆ ನಿಯಮಿತವಾಗಿ ನಡೆಸುವ ಬರವಣಿಗೆ ಮತ್ತು ಸಂವಹನಕ್ಕೆ ತಾತ್ಕಾಲಿಕ ವಿರಾಮ ನೀಡುವುದಾಗಿ ಹೇಳಿದ್ದಾರೆ.
ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅಮಿತಾಬ್ ಬಚ್ಚನ್, ವಿಶ್ರಾಂತಿ ಪಡೆದು ಚೇತರಿಸಿಕೊಳ್ಳಲು ಕೆಲವು ದಿನಗಳ ಕಾಲ ವಿರಾಮ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಏನನ್ನೂ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ತಮ ಬ್ಲಾಗ್ನಲ್ಲಿಯೂ ಈ ಕುರಿತು ಬರೆದುಕೊಂಡಿರುವ ಅವರು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಸದ್ಯಕ್ಕೆ ವಿಶ್ರಾಂತಿ ಮತ್ತು ಚೇತರಿಕೆಯಲ್ಲಿರುವುದರಿಂದ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕವಾಗಿ ಶುಭಾಶಯ ಕಳುಹಿಸಿದವರಿಗೂ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಈ ಸಂದೇಶದ ಬೆನ್ನಲ್ಲೇ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದು, ಅವರು ಶೀಘ್ರ ಗುಣಮುಖರಾಗಿ ಮತ್ತೆ ತಮ ಎಂದಿನ ಚಟುವಟಿಕೆಗಳಿಗೆ ಮರಳಲಿ ಎಂದು ಹಾರೈಸಿದ್ದಾರೆ.
ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕ:
ಅಮಿತಾಬ್ ಬಚ್ಚನ್ ಹಲವು ವರ್ಷಗಳಿಂದ ತಮ ಬ್ಲಾಗ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ತಮ ಆಲೋಚನೆಗಳು, ಅನುಭವಗಳು ಮತ್ತು ವೈಯಕ್ತಿಕ ಬದುಕಿನ ವಿಚಾರಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೇ ಮುಂಬೈನ ತಮ ನಿವಾಸದ ಹೊರಗೆ ಭಾನುವಾರದಂದು ಅಭಿಮಾನಿಗಳನ್ನು ಭೇಟಿಯಾಗಿದ್ದರು.
ಸದ್ಯಕ್ಕೆ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಅವರ ಆರೋಗ್ಯ ಸಮಸ್ಯೆಯ ಸ್ವರೂಪ ಅಥವಾ ವೈದ್ಯಕೀಯ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
