Monday, November 25, 2024
Homeರಾಜ್ಯಸುಲಭವಾಗಿ ಎಲ್ಲಾ 28 ಸ್ಥಾನಗಳನ್ನು ಗೆದ್ದೇ ಗೆಲ್ತೀವಿ : ವಿಜಯೇಂದ್ರ

ಸುಲಭವಾಗಿ ಎಲ್ಲಾ 28 ಸ್ಥಾನಗಳನ್ನು ಗೆದ್ದೇ ಗೆಲ್ತೀವಿ : ವಿಜಯೇಂದ್ರ

ಬೆಂಗಳೂರು,ಏ.6- ರಾಜ್ಯದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಪರವಾದ ಅಲೆ ಎಲ್ಲೆಡೆ ಬೀಸುತ್ತಿದ್ದು, ಇದನ್ನು ಮತವಾಗಿ ಪರಿವರ್ತಿಸಿದರೆ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ನಾವು ಸುಲಭವಾಗಿ ಗೆಲ್ಲಲಿ ದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಜನತಾ ಪಕ್ಷದ 44ನೇ ಸ್ಥಾಪನಾ ದಿನಾಚರಣೆ ನಿಮಿತ್ತ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವು ಸ್ವಲ್ಪ ಪರಿಶ್ರಮ ಹಾಕಿದರೆ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ದಾಖಲೆ ಬರೆಯಬಹುದು. ಇದಕ್ಕಾಗಿ ಕಾರ್ಯಕರ್ತರು ಸಜ್ಜಾಗಬೇಕೆಂದು ಕರೆ ಕೊಟ್ಟರು.

ಮೋದಿಯವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತನೆ ಮಾಡಬೇಕು. ನರೇಂದ್ರಮೋದಿಯವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ. ದೇಶಾದ್ಯಂತ ಕಿರುದೇಣಿಗೆ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ನಮೋ ಆಪ್ ಮೂಲಕ ಭಾಗವಹಿಸಬೇಕು. ಎಷ್ಟಾದರೂ ಸರಿ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರಮೋದಿ ಅವರು ಬರೀ ಭಾರತಕ್ಕೆ ನಾಯಕತ್ವ ಕೊಟ್ಟವರಲ್ಲ, ವಿಶ್ವಕ್ಕೆ ನಾಯಕತ್ವ ಕೊಟ್ಟವರು. ಪ್ರಧಾನಿಯಾಗಿ ಹತ್ತು ವರ್ಷ ವಿಶ್ರಾಂತಿ ತೆಗೆದುಕೊಳ್ಳದೇ ಕೆಲಸ ಮಾಡುತ್ತಿರುವವರು ಇದ್ದಾರೆ ಅಂದರೆ ಅದು ನರೇಂದ್ರಮೋದಿ ಮಾತ್ರ ಎಂದರು.

ಬಿಜೆಪಿ ಅಂದರೆ ಅಲ್ಪಸಂಖ್ಯಾತರ ವಿರೋಧಿಗಳು ಎನ್ನುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವುದಕ್ಕೂ ಮುನ್ನ ಹಿಂದೂ ಮಹಿಳೆಯರಿಗೆ ಯಾವ ರೀತಿ ಗೌರವ ಸಿಗುತ್ತದೋ ಅದೇ ರೀತಿ ಅಲ್ಪಸಂಖ್ಯಾತರ ಮಹಿಳೆಯರಿಗೆ ಗೌರವ ಸಿಗಬೇಕು ಎಂಬ ಕಾರಣಕ್ಕೆ ತ್ರಿವಳಿ ತಲಾಕ್ ರದ್ದು ಮಾಡಿದವರು ಪ್ರಧಾನಿ ನರೇಂದ್ರಮೋದಿ ಎಂದು ನೆನಪು ಮಾಡಿಕೊಟ್ಟರು.

ಈ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ನರೇಂದ್ರ ಮೋದಿಯವರು ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗೆ ತಿಳಿಸಬೇಕು. ಯೋಧರ ರೀತಿಯಲ್ಲಿ ನಾವು ಸಂಘಟಿತರಾಗಿ ಕೆಲಸ ಮಾಡಬೇಕು. ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿ ಆಗುವುದನ್ನು ನೋಡುವುದಕ್ಕೆ ಬಹಳ ದಿನಗಳು ದೂರವಿಲ್ಲ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

18 ಕೋಟಿ ಕಾರ್ಯಕರ್ತರು;
ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ 18 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವುದರ ಜೊತೆಗೆ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಪಕ್ಷ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ನಮ್ಮ ಪಕ್ಷದ ಸಿದ್ದಾಂತದಲ್ಲಿ ಎಲ್ಲಿಯೂ ಕೂಡ ಕಂಪ್ರಾಮೈಸ್ ಇಲ್ಲದೇ, ತತ್ವ ಸಿದ್ದಾಂತಗಳನ್ನು ಉಳಿಸಿಕೊಂಡು ಹೋಗುತ್ತಿದ್ದೇವೆ ಎಂದರು .

ರಾಜ್ಯದಲ್ಲಿ ಅನಂತಕುಮಾರ್, ವಿ.ಎಸ್.ಆಚಾರ್ಯ, ಶಂಕರಮೂರ್ತಿಗಳು ಸೇರಿ ಹಿರಿಯರ ಮಾರ್ಗದರ್ಶನ, ಬಿ.ಎಸ್. ಯಡಿಯೂರಪ್ಪ ಹೋರಾಟದಿಂದ ಬಿಜೆಪಿ ಹಳ್ಳಿ ಹಳ್ಳಿಗಳಲ್ಲಿ ತಲೆ ಎತ್ತಿ ನಿಂತಿದೆ. ಯಡಿಯೂರಪ್ಪ ಪಾದಯಾತ್ರೆ, ಹೋರಾಟ, ಸೈಕಲ್ ಯಾತ್ರೆಗಳ ಮೂಲಕ ಪಕ್ಷ ಸಂಘಟನೆ ಮಾಡಿದ್ದು, ಕೇಂದ್ರದಲ್ಲಿ ಎಲ್ .ಕೆ. ಅಡ್ವಾಣಿ ಅವರನ್ನು ಮರೆಯಲು ಸಾಧ್ಯವಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರು ದೇಶವನ್ನು ಮುನ್ನಡಿಸಿದ್ದು, ನರೇಂದ್ರ ಮೋದಿಯಂತ ಪುಣ್ಯಾತ್ಮ ಪ್ರಧಾನಿ ಆದಮೇಲೆ ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಿಲ್ಲ ಎಂದರು.

ಈ ಸಂದರ್ಭದಲ್ಲಿ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮತ್ತು ಪ್ರಮುಖರು ಉಪಸ್ಥಿತರಿದ್ದರು. ತದನಂತರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆ ನಿಮಿತ್ತ ಮಾಡಿದ ಭಾಷಣವನ್ನು ನಾಯಕರು ವೀಕ್ಷಿಸಿದರು.

RELATED ARTICLES

Latest News