Monday, May 20, 2024
Homeಬೆಂಗಳೂರುಸರ ಅಪಹರಿಸಲು ಏರಿಯಾಗಳನ್ನು ಗುರುತಿಸುತ್ತಿದ್ದ ಖತರ್ನಾಕ್ ಮಹಿಳೆ ಸೆರೆ

ಸರ ಅಪಹರಿಸಲು ಏರಿಯಾಗಳನ್ನು ಗುರುತಿಸುತ್ತಿದ್ದ ಖತರ್ನಾಕ್ ಮಹಿಳೆ ಸೆರೆ

ಬೆಂಗಳೂರು, ಏ.6- ಸರಗಳನ್ನು ಅಪಹರಿಸಲು ಪ್ರದೇಶಗಳನ್ನು ಗುರುತಿಸುತ್ತಿದ್ದ ಮಹಿಳೆಯನ್ನು ಅನ್ನಪೂರ್ಣೆಶ್ವರಿ ನಗರದ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕಿನ ಉಪಕಾರ್ ಪೇಟೆಯ ನಿವಾಸಿ ರೋಜಾ (32) ಬಂಧಿತ ಮಹಿಳೆ.

ಮುದ್ದಿನ ಪಾಳ್ಯ, ವಿಶ್ವೇಶ್ವರಯ್ಯ ಲೇಔಟ್ 8ನೇ ಬ್ಲಾಕ್ ನಿವಾಸಿ ನಿರ್ಮಲಾ ಎಂಬುವವರು ಮಾ.15 ರಂದು ಬೆಳಿಗ್ಗೆ 5 ಗಂಟೆ ಸುಮಾರಿನಲ್ಲಿ ಮನೆಯ ಮುಂದೆ ನೀರು ಹಾಕುತ್ತಿದ್ದಾಗ ಇಬ್ಬರು ಅಪ್ರಾಪ್ತ ಯುವಕರು ಕಳ್ಳತನ ಮಾಡಿದ್ದ ಸ್ಕೂಟರ್ನಲ್ಲೇ ಬಂದು 3 ಲಕ್ಷ ರೂ ಬೆಲೆ ಬಾಳುವ 45 ರೂ. ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿತೆ ರೋಜಾಳನ್ನು ಬಂಧಿಸಿ 5 ಲಕ್ಷ ರೂ ಬೆಲೆ ಬಾಳುವ 103 ಗ್ರಾಂ ಚಿನ್ನದ ಒಡವೆಗಳನ್ನು, ಕೃತ್ಯಕ್ಕೆ ಬಳಸಿದ್ದ ಹೋಂಡಾ ಅ್ಯಕ್ಟಿವಾ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗ್ಗೆ ಮತ್ತು ಸಂಜೆ ನಗರದ ವಿವಿಧ ಪ್ರದೇಶಗಳಿಗೆ ಹೋಗುತ್ತಿದ್ದ ಆರೋಪಿತೆ ರೋಜಾ ಯಾವ ಮನೆಯವರು ಬೆಳಗ್ಗೆ ಮನೆಯ ಮುಂದೆ ರಂಗೋಲಿ ಹಾಕುತ್ತಾರೆ, ಯಾವ ಮನೆಯವರು ವಾಯು ವಿಹಾರ ಮಾಡುತ್ತಾರೆ ಎಂದು ತಿಳಿದುಕೊಂಡು ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಅಪ್ರಾಪ್ತರಿಗೆ ಹೇಳುತ್ತಿದ್ದಳು.

ಈಕೆಯ ಅಣತಿಯಂತೆ ಈ ಇಬ್ಬರು ಅಪ್ರಾಪ್ತರು ಕಳ್ಳತನ ಮಾಡಿ ಸ್ಕೂಟರ್ನಲ್ಲಿ ಓಡಾಡಿಕೊಂಡು ಮಹಿಳೆಯರ ಸರಗಳನ್ನು ಎಗರಿಸಿಕೊಂಡು ಬಂದು ಆರೋಪಿತೆಗೆ ಕೊಡುತ್ತಿದ್ದರು.ಆ ಚಿನ್ನದ ಸರಗಳ ಪೈಕಿ ಕೆಲವನ್ನು ಮಾರಾಟ ಮಾಡಿದರೆ, ಇನ್ನು ಕೆಲವು ಆಭರಣಗಳನ್ನು ಗಿರವಿ ಇಟ್ಟು ಹಣಪಡೆದುಕೊಂಡಿರುವುದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ.

ವಿಚಾರಣೆ ವೇಳೆ ಆರೋಪಿತೆ ಇಬ್ಬರು ಅಪ್ರಾಪ್ತರ ಬಗ್ಗೆ ಮಾಹಿತಿ ನೀಡಿದ್ದು, ಈ ಪೈಕಿ ಒಬ್ಬ ಅಪ್ರಾಪ್ತನನ್ನು ಕರೆತಂದು ವಿಚಾರಣೆ ನಡೆಸಿದಾಗ ರಾಜರಾಜೇಶ್ವರಿ ನಗರ ಠಾಣೆಯ 2, ಕೆಂಗೇರಿ 2,ಅನ್ನಪೂರ್ಣೆಶ್ವರಿ ನಗರದ ಠಾಣೆಯ ಒಂದು ಸರ ಅಪಹರಣ ಪ್ರಕರಣಗಳು ಪತ್ತೆಯಾಗಿವೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬನ ಪತ್ತೆ ಕಾರ್ಯ ಮುಂದುವರೆದಿದೆ.

ಕಾನೂನು ಸಂಘರ್ಷಕ್ಕೆ ಒಳಗಾದ ಈ ಇಬ್ಬರು ಅಪ್ರಾಪ್ತರ ವಿರುದ್ಧ ಈಗಾಗಲೇ ಕೆಂಗೇರಿ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ, ತಾವರೇಕೆರೆ, ಕುಂಬಳಗೋಡು ಪೊಲೀಸ್ ಠಾಣೆಗಳಲ್ಲಿ ಸುಮಾರು 12ಕ್ಕೂ ಹೆಚ್ಚು ಡಕಾಯಿತಿ, ಸರ ಅಪಹರಣ, ಸುಲಿಗೆ ಪ್ರಕರಣಗಳು ದಾಖಲಾಗಿದ್ದು, ಬಾಲನ್ಯಾಯ ಮಂಡಳಿಯಲ್ಲಿ ವಿಚಾರಣೆಯಲ್ಲಿರುತ್ತದೆ.

RELATED ARTICLES

Latest News