ಒಡಿಶಾ (ಭುವನೇಶ್ವರ್), ಏ.6- ದೇಶಾದ್ಯಂತ ತಾಪಮಾನ ಹೆಚ್ಚಾಗುತ್ತಲೇ ಇದೆ. ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕರ್ನಾಟಕದ ಕಲಬುರಗಿಯಲ್ಲಿ ಕೂಡ 43.3ರಷ್ಟು ತಾಪಮಾನ ದಾಖಲಾಗಿ ವಾತಾವರಣ ನಿಗಿನಿಗಿ ಕೆಂಡದಂತಾಗಿದೆ.
ಭುವನೇಶ್ವರದ ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಉಮಾಶಂಕರ್ ದಾಸ್ ತನ್ನ ಟ್ವೀಟರ್ ಖಾತೆಯಲ್ಲಿ ಏಷ್ಯಾದ ಹತ್ತು ಪ್ರಮುಖ ಸ್ಥಳಗಳ ತಾಪಮಾನವನ್ನು ದಾಖಲಿಸಿದ್ದು, ಮ್ಯಾನ್ಮಾರ್ ಚೌಕ್ನಲ್ಲಿ ಬರೋಬ್ಬರಿ 45.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಅತ್ಯಂತ ಹೆಚ್ಚು ತಾಪಮಾನ ದಾಖಲಾದ ಸ್ಥಳವೆಂದು ಕಂಡುಬಂದಿದೆ.
ಆಂಧ್ರಪ್ರದೇಶದ ನಂದ್ಯಾಲದಲ್ಲಿ ನಿನ್ನೆ 43.7 ರಷ್ಟು ತಾಪಮಾನ ದಾಖಲಾಗಿದೆ. ದೇಶದಲ್ಲಿ ಅತಿಹೆಚ್ಚು ತಾಪಮಾನ ದಾಖಲಾದ ಸ್ಥಳ ಇದಾಗಿದೆ. ಏಷ್ಯಾದಲ್ಲೇ ನಾಲ್ಕನೇ ಅತ್ಯಂತ ಬಿಸಿಯಾದ ಸ್ಥಳವೆಂದು ಇದನ್ನು ಪಟ್ಟಿ ಮಾಡಲಾಗಿದೆ. ಐಎಂಡಿ ಮಾಹಿತಿ ಪ್ರಕಾರ ಭುವನೇಶ್ವರದಲ್ಲಿ ಇಂದು 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಒಡಿಶಾದ 14 ಜಿಲ್ಲೆಗಳಲ್ಲಿ ಉಷ್ಣದ ಅಲೆಗಳು ಹೆಚ್ಚಾಗಲಿವೆ ಎಂದು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಕಲಬುರಗಿಯಲ್ಲಿ 43.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ 9ನೇ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ರಾಜ್ಯದ ಬಹುತೇಕ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಹಲವೆಡೆ ಬಿಸಿ ಗಾಳಿ ಬೀಸುತ್ತಿದೆ. ಜನ – ಜಾನುವಾರುಗಳ ಕುಡಿಯುವ ನೀರಿಗಾಗಿ ಸಂಕಷ್ಟ ಎದುರಾಗಿದೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಜನರು ಮನೆಯಿಂದ ಹೊರ ಬರಬಾರದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.