Homeರಾಷ್ಟ್ರೀಯಡಿಜಿಟಲ್‌ ಅರೆಸ್ಟ್ ಹೆಸರಿನಲ್ಲಿ ನಿವೃತ್ತ ನ್ಯಾಯಾಧೀಶರಿಗೆ ₹2.5 ಕೋಟಿ ವಂಚನೆ; ಮತ್ತೊಬ್ಬ ಆರೋಪಿ ವಶಕ್ಕೆ

ಡಿಜಿಟಲ್‌ ಅರೆಸ್ಟ್ ಹೆಸರಿನಲ್ಲಿ ನಿವೃತ್ತ ನ್ಯಾಯಾಧೀಶರಿಗೆ ₹2.5 ಕೋಟಿ ವಂಚನೆ; ಮತ್ತೊಬ್ಬ ಆರೋಪಿ ವಶಕ್ಕೆ

ಕೊಚ್ಚಿ, ಅ. 24 (ಪಿಟಿಐ)- ನಿವೃತ್ತ ನ್ಯಾಯಾಧೀಶರೊಬ್ಬರಿಗೆ ಡಿಜಿಟಲ್‌ ಬಂಧನದ ಹೆಸರಿನಲ್ಲಿ ವಂಚಿಸಿ, ಅವರಿಂದ 2.5 ಕೋಟಿ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಚ್ಚಿ ನಗರ ಪೊಲೀಸರು, ಇಲ್ಲಿನ ಎಲಮಕ್ಕರ ನಿವಾಸಿ ಎಬಿನ್‌ ಬಸಿಲ್‌ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ, ರಾಜಸ್ಥಾನ ಪೊಲೀಸರು ಕೊಚ್ಚಿ ಪೊಲೀಸರ ನೆರವಿನೊಂದಿಗೆ ವರಪುಳದ ಮನ್ನಂತುರುತು ನಿವಾಸಿ ಆನಂದ್‌ ಬಾಬು ಎಂಬಾತನನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.

ನಿವೃತ್ತ ನ್ಯಾಯಾಧೀಶರಿಂದ ವಂಚಿಸಲಾದ ಹಣವನ್ನು ಕೇರಳದಲ್ಲಿ ಆರೋಪಿಗಳು ಹೊಂದಿದ್ದ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಂಚನೆಯಲ್ಲಿ ಕೇರಳದ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ಇರುವುದರಿಂದ, ರಾಜಸ್ಥಾನ ಪೊಲೀಸರು ರಾಜ್ಯದಲ್ಲಿ ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂತ್ರಸ್ತರಾದ 90 ವರ್ಷದ ಮಾಜಿ ಜಿಲ್ಲಾ ನ್ಯಾಯಾಧೀಶ ಗಣಪತ್‌ ಸಿಂಗ್‌ ಭಂಡಾರಿ ಅವರಿಗೆ ಸಿಬಿಐ ಅಧಿಕಾರಿಗಳು ಮತ್ತು ಆರ್‌ಬಿಐ ವ್ಯವಸ್ಥಾಪಕರ ಸೋಗಿನಲ್ಲಿ ಬಂದ ವಂಚಕರು 2.5 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಸುಮಾರು 15 ದಿನಗಳ ಕಾಲ ಅವರನ್ನು ಡಿಜಿಟಲ್‌ ಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಲಾಗಿದೆ.

ಪುಲ್ವಾಮಾ ಪ್ರಕರಣಕ್ಕೆ ಸಂಬಂಧಿಸಿದ ಹವಾಲಾ ವ್ಯವಹಾರಗಳಲ್ಲಿ ನಿವೃತ್ತ ನ್ಯಾಯಾಧೀಶರಿಗೆ ನಂಟಿದೆ ಎಂದು ಆರೋಪಿಗಳು ಸುಳ್ಳು ಹೇಳಿ, ಆ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಜಿಟಲ್‌ ಬಂಧನ ಎಂಬುದು ಒಂದು ರೀತಿಯ ಸೈಬರ್‌ ವಂಚನೆಯಾಗಿದ್ದು, ಇದರಲ್ಲಿ ವಂಚಕರು ಪೊಲೀಸ್‌ ಅಥವಾ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಬಂದು, ಸಂತ್ರಸ್ತರನ್ನು ಅಪರಾಧ ಪ್ರಕರಣವೊಂದಕ್ಕೆ ತಳುಕು ಹಾಕಿ, ಅವರನ್ನು ಬಂಧಿಸುವುದಾಗಿ ಬೆದರಿಸುತ್ತಾರೆ. ಅವರು ಸಂತ್ರಸ್ತರನ್ನು ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ವಿಡಿಯೋ ಕರೆಯಲ್ಲಿ ಇರಿಸಿಕೊಂಡು, ಅವರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸುವ ನೆಪದಲ್ಲಿ ಹಣವನ್ನು ವರ್ಗಾಯಿಸುವಂತೆ ಒತ್ತಾಯಿಸುತ್ತಾರೆ.

RELATED ARTICLES
spot_img

Latest News