ಬೆಂಗಳೂರು,ಅ.24- ನಗರದ ಹೊರವಲಯದಲ್ಲಿ ಬೈಕ್ ವೀಲಿಂಗ್ ಹಾವಳಿ ಮಿತಿಮೀರಿದ್ದು, ಯುವಕರ ಹುಚ್ಚಾಟಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಪ್ರಮುಖವಾಗಿ ಟೆಕ್ಕಿಗಳು ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ತಮ ಪ್ರಾಣದ ಹಂಗು ತೊರೆದು ಅಪಾಯಕಾರಿ ಬೈಕ್ ವೀಲಿಂಗ್ ಸ್ಟಂಟ್ ನಡೆಸುತ್ತಿರುವುದು ಕಂಡುಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿ ಬೈಕ್ ವೀಲಿಂಗ್‌ಗಾಗಿಯೇ ನಗರದಿಂದ ಐಶಾರಾಮಿ ಬೈಕ್‌ಗಳಲ್ಲಿ ತೆರಳುವ ಯುವಕರು ಅದರಲ್ಲೂ ಬಹುತೇಕ ಸಿಲಿಕಾನ್ ಸಿಟಿಯ ಟೆಕ್ಕಿಗಳು ಅಪಾಯಕಾರಿ ಸಾಹಸ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಕಂಡುಬಂದಿದೆ.
ಸಂಚಾರಿ ಪೊಲೀಸರು ಸ್ಥಳದಲ್ಲಿದ್ದರೂ ಸಹ ಅವರ ಕಣ್ತಪ್ಪಿಸಿ ವೀಲಿಂಗ್ ಮಾಡುತ್ತಿರುವುದರಿಂದ ಸಾರ್ವಜನಿಕರು ತೀವ್ರ ಆಕ್ರೋಶದ ಜೊತೆಗೆ ಆತಂಕ ವ್ಯಕ್ತಪಡಿಸಿದ್ದಾರೆ.ದೇವನಹಳ್ಳಿ ಹೊರವಲಯಕ್ಕೆ ಬೈಕ್‌ಗಳಲ್ಲಿ ಹೋಗುವ ಸವಾರರು ಎನ್‌ಎಚ್ 44ರ ಹೆದ್ದಾರಿಯಲ್ಲಿ ವಾಹನಗಳು ಅತಿವೇಗವಾಗಿ ಹೋಗುತ್ತಿದ್ದರೂ ಸಹ ತಮ ಪ್ರಾಣದ ಹಂಗು ತೊರೆದು ಒಂಟಿಚಕ್ರದಲ್ಲಿ ವೀಲಿಂಗ್ ಮಾಡುತ್ತಿದ್ದಾರೆ.
ಹೆದ್ದಾರಿಯಲ್ಲಿ ವೀಲಿಂಗ್ ಹುಚ್ಚಾಟಕ್ಕೆ ತಕ್ಷಣವೇ ಬ್ರೇಕ್ ಹಾಕುವ ಮೂಲಕ ಅಮಾಯಕರ ಜೀವ ಉಳಿಸಬೇಕಾಗಿದೆ ಎಂದು ಸಾರ್ವಜನಿಕರು ಹಾಗೂ ಇತರೆ ವಾಹನ ಸವಾರರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
