ಬೆಂಗಳೂರು,ಏ.7- ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸರ್ಕಾರ ಅಧಿಕಾರದಲ್ಲಿದೆ. ನಿಮ್ಮ ಸಮಸ್ಯೆಗಳಿಗೆ ನಾವು ಪರಿಹಾರ ಹುಡುಕಿಕೊಡಬಹುದೇ ಹೊರತು, ದೆಹಲಿಯವರು ಬಂದು ಕೆಲಸ ಮಾಡಿಕೊಡುವುದಿಲ್ಲ. ಮತ ಹಾಕಿ, ಕೆಲಸ ಕೇಳಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತದಾರರನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ.ಕೆ.ಸುರೇಶ್ ಪರವಾಗಿ ರಾಜರಾಜೇಶ್ವರಿ ನಗರದ ಹಲವು ಅಪಾರ್ಟ್‍ಮೆಂಟ್‍ಗಳಲ್ಲಿ ನಿವಾಸಿಗಳ ಸಭೆ ನಡೆಸಿ ಮತಯಾಚನೆ ಮಾಡಿದರು.
ಆರ್.ಎನ್.ಎಸ್ ಶಾಂತಿನಿವಾಸ್ ಅಪಾರ್ಟ್‍ಮೆಂಟ್ ಮತ್ತು ಯಶವಂತಪುರದ ಗೋಲ್ಡನ್ ಗ್ರಾಂಡ್ ಅಪಾರ್ಟ್‍ಮೆಂಟ್‍ಗಳಲ್ಲಿ ಪ್ರಚಾರ ನಡೆಸಿದ ಡಿ.ಕೆ.ಶಿವಕುಮಾರ್, ಕೆಲವು ಅಪಾರ್ಟ್‍ಮೆಂಟ್‍ಗಳನ್ನು ಬಿಲ್ಡರ್‍ಗಳು ಮಾಲೀಕರಿಗೆ ಹಸ್ತಾಂತರಿಸಿಲ್ಲ ಮತ್ತು ನಿರ್ವಹಣಾ ಕಾಮಗಾರಿಯನ್ನೂ ಪೂರ್ಣಗೊಳಿಸಿಲ್ಲ. ಇದು ತಮ್ಮ ಗಮನಕ್ಕೆ ಬಂದಿದೆ.
ಗೋಲ್ಡನ್ ಅಪಾರ್ಟ್‍ಮೆಂಟ್‍ನಲ್ಲಿ ಒಂದೂವರೆ ಸಾವಿರ ಮತಗಳಿವೆ. ಅಷ್ಟೂ ಜನ ಡಿ.ಕೆ.ಶಿವಕುಮಾರ್‍ರನ್ನು ಬೆಂಬಲಿಸಿ ಗೆಲ್ಲಿಸಿ. ಬಳಿಕ ನಮ್ಮ ಬಳಿ ಬನ್ನಿ. ನಿಮ್ಮ ಕೆಲಸ ಮಾಡಿಕೊಡುವುದು ನಮ್ಮ ಕರ್ತವ್ಯ. ಅದನ್ನು ಬಿಟ್ಟು ನಾವು ಬಿಜೆಪಿಗೆ, ಮೋದಿಗೆ ಮತ ಹಾಕುತ್ತೇವೆ ಎಂದರೆ ದೆಹಲಿಯವರಿಂದಲೇ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿದರು.
ಬೆಂಗಳೂರಿನಲ್ಲಿ ಬರಪರಿಸ್ಥಿತಿಯಿಂದಾಗಿ 7 ಸಾವಿರ ಬೋರ್‍ವೆಲ್‍ಗಳು ಬತ್ತಿ ಹೋಗಿವೆ. ಆನೇಕಲ್ ದಕ್ಷಿಣ ಭಾಗದ ಕ್ಷೇತ್ರಗಳಿಗೆ ನೀರು ಪಂಪ್ ಮಾಡಲು ಎದುರಾಗುತ್ತಿರುವ ಸಮಸ್ಯೆ ನನಗೆ ಮಾತ್ರ ಗೊತ್ತಿದೆ. ಆದರೂ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಕಾರಣಕ್ಕೆ ನಿರಂತರವಾಗಿ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದರು.
ಸಂಸದ ಡಿ.ಕೆ.ಸುರೇಶ್ ಜನಸಾಮಾನ್ಯರ ನಡುವೆ ಇದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಗೆಲ್ಲಿಸಿ. ನಾವು ಕೊಟ್ಟ ಮಾತನ್ನು ತಪ್ಪುವುದಿಲ್ಲ. ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಅಪಾರ್ಟ್‍ಮೆಂಟ್‍ಗಳ ಸಮಸ್ಯೆಗಳನ್ನು ನಿವಾರಿಸುವುದು ಸ್ಥಳೀಯ ಶಾಸಕರ ಕರ್ತವ್ಯ. ಆದರೆ ಅವರು ಅದನ್ನು ಸರಿಯಾಗಿ ನಿರ್ವಹಿಸಿಲ್ಲ. ನೀವು ನಮ್ಮ ಪಕ್ಷಕ್ಕೆ ಮತ ಹಾಕಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನಾವು ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.