ಬೆಂಗಳೂರು,ಏ.7- ಪ್ರಸಕ್ತ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಶಾಸಕರಿಗೆ ಸಾಂಸ್ಕøತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಲು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮುಂದಾಗಿದ್ದಾರೆ.
16ನೇ ವಿಧಾನಸಭೆಯ ಶಾಸಕರುಗಳಲ್ಲಿನ ವಿವಿಧ ಸಾಂಸ್ಕøತಿಕ ಕ್ರೀಡಾ ಚಟುವಟಿಕೆಗಳ ಆಸಕ್ತಿಯನ್ನು ಪ್ರೋತ್ಸಾಹಿಸಲು ಕಾರ್ಯಕ್ರಮವೊಂದನ್ನು ಆಯೋಜಿಸಲು ಸಭಾಧ್ಯಕ್ಷರು ನಿರ್ಧರಿಸಿದ್ದಾರೆ.
ಕಲೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳು ಹಾಗೂ ಕ್ರೀಡೆಯಲ್ಲಿ ಹೊಂದಿರುವ ಆಸಕ್ತಿಯ ಬಗ್ಗೆ ಶಾಸಕರು ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಏ.30ರ ಒಳಗಾಗಿ ಶಾಸಕರು ಕಲೆ, ಸಾಹಿತ್ಯ, ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಹೊಂದಿರುವ ಆಸಕ್ತಿಯ ಬಗೆಗಿನ ಮಾಹಿತಿಯನ್ನು ಶಾಸನ ರಚನಾ ಶಾಖೆಗೆ ಸಲ್ಲಿಸಲು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.
ನಾಟಕ, ಯಕ್ಷಗಾನ, ಆಶುಭಾಷಣ, ಮಿಮಿಕ್ರಿ, ಏಕಪಾತ್ರ ಅಭಿನಯ, ಚಟುವಟಿಕೆಗಳು ಕಲಾ ವಿಭಾಗದಲ್ಲಿ ಸೇರಿವೆ. ಶಾಸ್ತ್ರೀಯ, ಹಿಂದೂಸ್ಥಾನಿ, ಕರ್ನಾಟಕ ಸಂಗೀತ, ಜಾನಪದ ಗೀತೆ, ಭಾವಗೀತೆ, ಚಿತ್ರಗೀತೆ, ನೃತ್ಯ, ಸಾಂಸ್ಕøತಿಕ ಚಟುವಟಿಕೆಗಳ ವಿಭಾಗದಲ್ಲಿವೆ.
ಇನ್ನು ಕ್ರೀಡಾ ವಿಭಾಗದಲ್ಲಿ ಕಬಡ್ಡಿ, ಈಜು, ಕುಸ್ತಿ, ಫುಟ್ಬಾಲ್, ಕ್ರಿಕೆಟ್, ಕೇರಂ, ಚೆಸ್, ಬಾಸ್ಕೆಟ್ ಬಾಲ್, ಥ್ರೋಬಾಲ್, ಟೇಬಲ್ ಟೆನ್ನಿಸ್, ವಾಲಿಬಾಲ್, ಅಥ್ಲೆಟಿಕ್ಸ್, ಜಿಗಿತ, ಗುಂಡು ಎಸೆತ ಚಟುವಟಿಕೆಗಳಿವೆ. ವಿಶೇಷ ಆಸಕ್ತಿ ಇದ್ದವರು ಮಾಹಿತಿ ನೀಡಲು ಕೋರಿದ್ದಾರೆ.