ಬೆಂಗಳೂರು,ಅ.26- ಶ್ರೀ ಆದಿ ಮೂಲ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಮಾಗಡಿ ತಾಲ್ಲೂಕು ಕುದೂರು ಹೋಬಳಿ ಮುತ್ತಯ್ಯನಪಾಳ್ಯ ಗ್ರಾಮದಲ್ಲಿ 108 ಗಣಪತಿಗಳ ವಿಶೇಷ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.ವಿಶೇಷವೆಂದರೆ ವಿಶ್ವದ ನಾನಾ ಭಾಗಗಳಲ್ಲಿ ಪೂಜಿಸುವ ಗಣಪತಿಯನ್ನು ಇಲ್ಲಿ ಜೇಡಿಮಣ್ಣಿನಿಂದ ಪ್ರತಿರೂಪದಂತೆ ನಿರ್ಮಿಸಿ ಅದನ್ನು ಇಲ್ಲಿ ಭಕ್ತರಿಗೆ ವೀಕ್ಷಿಸುವ ಅಪೂರ್ವ ಅವಕಾಶ ಲಭಿಸಲಿದೆ.
ಇಡೀ ದೇಶದಲ್ಲೇ ಪ್ರಥಮ ಎಂಬಂತೆ ಗಣೇಶ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದು, ಇದನ್ನು ಕಳೆದ ಆರು ತಿಂಗಳಿನಿಂದ ಜೇಡಿಮಣ್ಣಿನಿಂದಲೇ ತಯಾರಿಸಲಾಗಿದೆ.ಶಿವಮೊಗ್ಗದ ಶಿಲ್ಪಿಗಳು ಇದನ್ನು ತಯಾರಿಸಿದ್ದು, ಈಗಾಗಲೇ ಅದನ್ನು ಮಾಗಡಿಗೆ ತರಲಾಗಿದೆ. ಅ.28 ರಿಂದ ಐದು ದಿನಗಳ ಕಾಲ ನಡೆಯುವ ವೈಭವ ಈ ಗಣೇಶೋತ್ಸವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ.28 ರಂದು ಬೆಳಗ್ಗೆ 9 ಗಂಟೆಗೆ ಗಣಪತಿ ಮಹಾಯಾಗ ನಡೆಯಲಿದ್ದು, ಡಾ.ಪಿ.ಆರ್.ನಾರಾಯಣಚಾರ್ಯ ಅವರು ಇದರ ನೇತೃತ್ವವನ್ನು ವಹಿಸಲಿದ್ದಾರೆ. ಸಂಜೆ 5 ಗಂಟೆಗೆ ನಂಜನಗೂಡಿನ ಶ್ರೀ ನಾಗಚಂದ್ರ ದೀಕ್ಷಿತ್ ಅವರ ಮತ್ತವರ ತಂಡದಿಂದ ಗಿರಿಜಾ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಅ.29 ರಂದು ಮಹಾಪೂಜೆ ಹಾಗೂ ಪ್ರಸಾದ ವಿನಿಯೋಗ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಗ್ರಾಮೀಣ ಸೊಗಡನ್ನು ಮೈಗೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿದ್ದು, ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರು ಹಾಗೂ ಮಹಿಳಾ ತಂಡಗಳ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
ನ.1 ರಂದು ರಾಜ್ಯೋತ್ಸವದ ಜೊತೆಗೆ ಸಾಂಸ್ಕೃತಿಕ ಕಲಾತಂಡಗಳೊಂದಿಗೆ 108 ಗಣಪತಿಗಳ ಅದ್ದೂರಿ ಮೆರವಣಿಗೆ ನಡೆಯಲಿದೆ.ಈ ಧಾರ್ಮಿಕ ಕಾರ್ಯದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಡಾ.ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರಹೆಗಡೆ, ವಿದ್ವಾನ್ ಗಣೇಶ ಘನಪಾಠಿ, ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಶ್ರೀ ದ್ವಾರಕಾನಾಥ ಗುರೂಜಿ, ಶ್ರೀ ರಂಗನಾಥ ಸ್ವಾಮೀಜಿ, ಡಾ.ಶ್ರೀ ಸಿದ್ದರಾಜು ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಶ್ರೀ ವಿಜಯನಾರಸಿಂಹ ಗುರುಗಳು, ನಂಜನಗೂಡಿನ ವೆಂಕಟೇಶ ಶಾಸ್ತ್ರಿ ಹಾಗೂ ಎಂ.ಆರ್.ರಾಮಸ್ವಾಮಿಯವರು ಪಾಲ್ಗೊಳ್ಳುತ್ತಿದ್ದಾರೆ.




ಸ್ಥಳೀಯ ಶಾಸಕರು ಹಾಗೂ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ, ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ರಮಣಶ್ರೀ ಪ್ರತಿಷ್ಠಾನದ ಎಸ್.ಷಡಾಕ್ಷರಿ, ಸಂಸದ ಸಿ.ಎನ್.ಮಂಜುನಾಥ್ ಸೇರಿದಂತೆ ಹಲವಾರು ಗಣ್ಯರು, ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಭಾಗವಹಿಸುವ ಭಕ್ತಾದಿಗಳಿಗಾಗಿ ವಿಶೇಷ ಬಹುಮಾನ ಯೋಜನೆಯನ್ನು ಹಮಿಕೊಳ್ಳಲಾಗಿದೆ.
ಪ್ರಥಮ ಪೂಜೆ ಪಡೆಯುವ ವಿಘ್ನನಿವಾರಕ ಗಣೇಶನನ್ನು ಬಾದ್ರಪದದ ಚೌತಿಯಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಧರ್ಮಶಾಸ್ತ್ರದ ಪ್ರಕಾರ ಅಂದು 108 ಗಣೇಶನನ್ನು ನೋಡಬೇಕೆಂಬ ಪ್ರತೀತಿ ಇದೆ.ಹಿಂದೆ ಮಕ್ಕಳು ಮನೆಮನೆಗೆ ಭೇಟಿ ನೀಡಿ ಗಣೇಶನಿಗೆ ಅಕ್ಷತೆಯನ್ನು ಹಾಕಿ ನಮಿಸುತ್ತಿದ್ದರು. ಅದು ಈಗಲೂ ಮುಂದುವರೆದಿದೆ. ಆದರೆ ಎಲ್ಲರೂ 108 ಗಣೇಶನನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಶ್ರೀ ಆದಿ ಮೂಲ ಮಹಾಗಣಪತಿ ಸೇವಾ ಸಮಿತಿ ವಿಶೇಷ ಗಣೇಶೋತ್ಸವವನ್ನು ಆಯೋಜಿಸುತ್ತಿದೆ.
ಇದರಲ್ಲಿ ಗಣೇಶನ ಮೂರ್ತಿಗಳನ್ನು ಪೂಜಿಸುವುದರಿಂದ ಹಿಡಿದು ವಿಸರ್ಜನೆವರೆಗೂ ಭಕ್ತಾದಿಗಳಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.ಇಂಡೋನೇಷ್ಯಾ, ಜಪಾನ್, ಥೈಲಾಂಡ್, ಅಮೆರಿಕ ಸೇರಿದಂತೆ ವಿವಿಧೆಡೆ ಗಣೇಶನನ್ನು ಭಕ್ತಿ ಭಾವದಿಂದ ಪೂಜಿಸುತ್ತಾರೆ. ಅಲ್ಲಿನ ಆಕೃತಿಯನ್ನೇ ಹೋಲುವ ಗಣೇಶಮೂರ್ತಿಗಳನ್ನು ಇಲ್ಲಿ ನೋಡಬಹುದಾಗಿದೆ.
