ಬೆಂಗಳೂರು, ಡಿ.21-ರಾಜ್ಯದಲ್ಲಿ ಮೈ ಕೊರೆಯುವ ಮಾಗಿ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಕರಾವಳಿ ಭಾಗ ಹೊರತು ಪಡಿಸಿ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಕುಸಿತವಾಗಿದೆ. ಹವಾಮಾನದಲ್ಲಾಗುತ್ತಿರುವ ಬದಲಾವಣೆಯ ಪರಿಣಾಮದಿಂದ ತಾಪಮಾನದಲ್ಲಿ ಏರಿಳಿತಗಳು ಉಂಟಾಗುತ್ತಿವೆ.
ತೀವ್ರ ಚಳಿಯ ಜೊತೆಗೆ ಆಗಾಗ್ಗೆ ಬೀಸುವ ಶೀತಗಾಳಿಯಿಂದಾಗಿ ಜನರು ಹೈರಣಾಗಿದ್ದಾರೆ. ಹಗಲು ವೇಳೆ ಬಿಸಿಲಿದ್ದರೂ ತಂಪಾದ ಗಾಳಿಯಿಂದ ಚಳಿಯ ಅನುಭವ ಉಂಟಾಗುತ್ತಿದೆ. ಮುಂಜಾನೆ ಹಲವೆಡೆ ಮಂಜು ಕವಿದ ವಾತಾರಣ ಇರುವುದಿಂದ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದಿಲ್ಲ. ಜೊತೆಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ಸಾಕಷ್ಟು ಇಬ್ಬನಿ ಬೀಳುತ್ತಿದೆ.
ಈ ರೀತಿಯ ಪ್ರತಿಕೂಲ ಹವಾಮಾನವು ಜನಜೀವನವನ್ನು ತಲ್ಲಣಗೊಳಿಸಿದೆ. ತೀವ್ರ ಚಳಿ ಇರುವ ಮುಂಜಾನೆ ಹಾಗೂ ರಾತ್ರಿ ವೇಳೆ ಮನೆಯಿಂದ ಹೊರಗೆ ಕೆಲಸ ಮಾಡುವವರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅಗತ್ಯವಿರುವಷ್ಟು ಹಾಗೂ ಸಾಧ್ಯವಾದಷ್ಟು ಬೆಚ್ಚಗಿನ ಉಡುಪುಗಳನ್ನು ಧರಿಸುವಂತೆ ವೈದ್ಯರು ಹಾಗೂ ಹವಾಮಾನ ತಜ್ಞರು ಸಲಹೆ ಮಾಡಿದ್ದಾರೆ.
ಮಂಜು ಮುಸುಕುವ ವಾತಾವರಣದಿಂದ ವಾಹನಗಳ ಸಂಚಾರಕ್ಕೆ ಪ್ರತಿಕೂಲವಾಗಿದೆಯಲ್ಲದೆ, ಹೂವು ಬಿಟ್ಟು ಕಾಯಿ ಕಚ್ಚುವ ಹಂತದಲ್ಲಿರುವ ಮಾವು,ತೊಗರಿ ಅವರೆ ಸೇರಿದಂತೆ ಹಲವು ಬೆಳೆಗಳಿಗೂ ಸೂಕ್ತ ವಾತಾವರಣವಲ್ಲ. ಇದರಿಂದ ಕಾಳು ಕಟ್ಟುವಿಕೆ ಕಡಿಮೆಯಾಗಲಿದೆ.
ಕರಾವಳಿ ಭಾಗದಲ್ಲಿ ಕನಿಷ್ಠ ಉಷ್ಣಾಂಶ 15 ಡಿ. ಸೆಂ. ನಷ್ಟು ಕಂಡು ಬಂದರೆ. ಗರಿಷ್ಠ ತಾಪಮಾನ 30 ಡಿ. ಸೆಂ. ನಷ್ಟು ಕಂಡು ಬರುತ್ತಿದೆ. ಆದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನಿಷ್ಠ ತಾಪಮಾನ 10 ಡಿ. ಸೆಂ.ಗಿಂತ ಕಡಿಮೆ ದಾಖಲಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ 13 ಡಿ. ಸೆಂ.ಗಿಂತ ಕಡಿಮೆ ದಾಖಲಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಸರಾಸರಿ 8ರಿಂದ 11 ಡಿ. ಸೆಂ. ನಷ್ಟು ದಾಖಲಾಗುತ್ತಿದೆ.
ಅದೇ ರೀತಿ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ 27-28 ಡಿ. ಸೆಂ. ಆಸುಪಾಸಿನಲ್ಲಿರುವುದು ಕಂಡುಬರುತ್ತಿದೆ. ಹಿಂಗಾರು ಮಳೆ ಕಳೆದ ಬಾರಿಯಂತೆ ಈ ಬಾರಿಯೂ ವಾಡಿಕೆಗಿಂತ ಕಡಿಮೆಯಾಗಿದೆ. ಸದ್ಯಕ್ಕೆ ಮಳೆ ಬರುವಂತಹ ಸನ್ನಿವೇಶಗಳು ಸೃಷ್ಟಿಯಾಗಿಲ್ಲ. ಹೀಗಾಗಿ ಚಳಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳು ಇಲ್ಲ. ಹೆಚ್ಚು ಕಡಿಮೆ ಡಿಸೆಂಬರ್ ಅಂತ್ಯವರೆಗೂ ಮೈ ಕೊರೆಯುವ ಚಳಿ ಕಾಡಲಿದೆ.
