ಬೆಂಗಳೂರು,ಏ.11- ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಹೊತ್ತಿನಲ್ಲಿ ರಾಜ್ಯದಲ್ಲಿ ಪಕ್ಷಗಳಿಂದ ಪ್ರಚಾರ ಜೋರಾಗಿದೆ. ಇದೇ ಭಾನುವಾರ ಏಪ್ರಿಲ್ 14ರಂದು ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಬಂದು ಮತ್ತೊಂದು ಸುತ್ತಿನ ಪ್ರಚಾರ ನಡೆಸಲಿದ್ದಾರೆ.
ಕರ್ನಾಟಕ ಬಿಜೆಪಿ ತನ್ನ ರಾಜಕೀಯ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಾದ ಸಾಮಾನ್ಯ ಜನರಿಗೆ ನಾನು ಮೋದಿ ಪರಿವಾರ, ಮೋದಿಗಾಗಿ ಒಂದು ಭಾನುವಾರ (ಮೋದಿಗಾಗಿ ಭಾನುವಾರ) ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರಚಾರ ಕಾರ್ಯ ತೀವ್ರಗೊಳಿಸಿದೆ.
ಏಪ್ರಿಲ್ 14 ರಂದು ಮೈಸೂರಿನ ರ್ಯಾಲಿಯಲ್ಲಿ ವೇದಿಕೆ ಹಂಚಿಕೊಳ್ಳಲಿರುವ ಪ್ರಧಾನಿ ಮೋದಿ, ದೇವೇಗೌಡ:
ಮೈಸೂರಿನಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವೇದಿಕೆ ಹಂಚಿಕೊಳ್ಳುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಮತ್ತು ಹಾಸನ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲುವಿಗೆ ಪೈಪೋಟಿ ನಡೆಸುತ್ತಿದೆ.
ಸಂಜೆ 4 ಗಂಟೆಗೆ ಸಾರ್ವಜನಿಕರೊಂದಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.ಮೈಸೂರಿನಲ್ಲಿ ದೇವೇಗೌಡರ ಉಪಸ್ಥಿತಿಯಿಂದ ಹಳೇ ಮೈಸೂರು ಭಾಗದಲ್ಲಿ ತಮ್ಮ ಪಕ್ಷಕ್ಕೆ ಬಲ ಬರಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇಲ್ಲಿ ಜೆಡಿಎಸ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ.
ರ್ಯಾಲಿ ಮತ್ತು ರೋಡ್ ಶೋನಲ್ಲಿ ಭಾಗವಹಿಸುವ ಜನರಿಗೆ ಪಕ್ಷದ ಚಿಹ್ನೆಯಾದ ಕಮಲದ ಆಧಿಕಾರದಲ್ಲಿ ಮೆಹೆಂದಿಯನ್ನು ತಮ್ಮ ಅಂಗೈಗೆ ಹಾಕಿಕೊಳ್ಳುವಂತೆ ಬಿಜೆಪಿ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರಿನಲ್ಲಿ ರೋಡ್ ಶೋ :
ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆ ವರೆಗೆ ಸುಮಾರು 2 ಕಿ.ಮೀ ವರೆಗೆ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ ಎಂದು ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಇದು ಬಲ್ಲಾಳ್ಬಾಗ್, ಪಿವಿಎಸ್ ಜಂಕ್ಷನ್ ಮತ್ತು ನವಭಾರತ ವೃತ್ತದ ಮೂಲಕ ಹಾದುಹೋಗುತ್ತದೆ. ರೋಡ್ ಶೋ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಪಕ್ಷವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಿದೆ ಎಂದು ಹೇಳಿದರು.
ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ, ಮಂಗಳೂರು, ಮೂಡುಬಿದಿರೆಯಿಂದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದೇಶಾಂಗ ಸಚಿವ ಜೈ ಶಂಕರ್ 15ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ.