ಗುವಾಹಟಿ,ಡಿ.21- ಪ್ರಧಾನಿ ನರೇಂದ್ರಮೋದಿ ಅವರು ಅಸ್ಸಾಂ ಪ್ರವಾಸದ ಎರಡನೇ ದಿನವಾದ ಇಂದು ಬೆಳಗ್ಗೆ ಬ್ರಹಪುತ್ರ ನದಿಯಲ್ಲಿ ಸಮರ ನೌಕೆಯೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ಸಂವಾದ ನಡೆಸಿದರು.
ಅಸ್ಸಾಂನ ವಿವಿಧ ಶಾಲೆಗಳ ಒಟ್ಟು 25 ವಿದ್ಯಾರ್ಥಿಗಳು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಮೋದಿ ಅವರು ಮೂರು ಅಂತಸ್ತಿನ ಎಂ.ವಿ.ಚರೈಡೇವ್ ಹಡಗಿನಲ್ಲಿ ವಿದ್ಯಾರ್ಥಿಗಳೊಂದಿಗೆ 45 ನಿಮಿಷಗಳ ಕಾಲ ಸಂಭಾಷಣೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಉದ್ಘಾಟನೆಗೊಂಡ ಒಳನಾಡು ಜಲಸಾರಿಗೆಯ ಗುವಾಹಟಿ ಗೇಟ್‌ವೇ ಟರ್ಮಿನಲ್‌ಗೆ ಆಗಮಿಸಿದ ಮೋದಿ ಅವರು ತೇಲುವ ಸೇತುವೆಯ ಮೂಲಕ ಹಡಗಿನೆಡೆಗೆ ಸಾಗಿದರು.
ಇಡೀ ಪ್ರದೇಶದಲ್ಲಿ ಭಾರೀ ಬಿಗಿಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ನದಿ ಪೊಲೀಸ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿ ನದಿಯ ಸುತ್ತ ಮುಂಜಾನೆಯಿಂದಲೇ ಕಣ್ಗಾವಲು ಇರಿಸಿದ್ದಾರೆ ಮತ್ತು ಗಸ್ತು ತಿರುಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಬ್ರಹಪುತ್ರ ನದಿಯ ಮೇಲೆ ದೋಣಿ ಸಾಗಾಟ ಸೇವೆಗಳನ್ನು ಶನಿವಾರದಿಂದ ಎರಡು ದಿನಗಳ ಕಾಲ ಅಮಾನತುಗೊಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳನ್ನು ಕಾಮ್‌ರೂಪ್ ಮೆಟ್ರೋಪಾಲಿಟನ್, ಮೋರಿಗಾಂವ್, ದಿಬ್ರೂಗಢ, ಕಚಾರ್, ಶ್ರೀಭೂಮಿ, ಬಕ್ಸಾ, ದಿಮಾಹಸಾವೊ, ಕೋಕ್ರಝಾರ್, ಗೋಲಾಘಾಟ್, ಕರ್ಬಿ ಆಂಗ್ಲಾಂಗ್ ಮತ್ತು ನಲ್‌ಬಾರಿ ಜಿಲ್ಲೆಗಳ ಶಾಲೆಗಳಿಂದ ಆಯ್ಕೆ ಮಾಡಲಾಗಿದೆ.
ಈ ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾರ್ಥಿನಿಲಯಗಳು, ಪಿಎಂಶ್ರೀ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಅಸ್ಸಾಂ ಜತಿಯಾ ಬಿದ್ಯಾಲಯ್, ಡಾನ್‌ಬಾಸ್ಕೋ ಇನ್‌ಸ್ಟಿಟ್ಯೂಷನ್‌್ಸ, ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳು ಸೇರಿದಂತೆ ಸರ್ಕಾರಿ, ವಸತಿ ಮತ್ತು ಖಾಸಗಿ ಶಾಲೆಗಳನ್ನು ಪ್ರತಿನಿಧಿಸಿದರು.
2018ರಿಂದ ಪರೀಕ್ಷಾ ಪೇ ಚರ್ಚಾವನ್ನು ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಿಂದ ಹೊರಬರಲು, ಕಲಿಕೆ ಮತ್ತು ಮಾನಸಿಕ ಆರೋಗ್ಯದೆಡೆಗೆ ಸಮತೋಲನದ ಅನುಸಂಧಾನ ಪ್ರವರ್ಧಿಸುವ ಸಲುವಾಗಿ ಪ್ರತಿ ವರ್ಷ ನಡೆಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಮಂಡಳಿ ಮತ್ತು ಪ್ರವೇಶ ಪರೀಕ್ಷೆಗಳನ್ನು ಒತ್ತಡ ಮುಕ್ತ ರೀತಿಯಲ್ಲಿ ಎದುರಿಸುವ ಕುರಿತಂತೆ ಅಮೂಲ್ಯ ಸಲಹೆಗಳನ್ನು ನೀಡುತ್ತಾರೆ.
