Sunday, December 21, 2025
Homeರಾಜ್ಯಅನುಮತಿ ನೀಡದಿದ್ದರೂ ನೀರಾವರಿ ಯೋಜನೆಗಳ ಮುಂದುವರಿಕೆ : ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದ ಡಿಕೆಶಿ

ಅನುಮತಿ ನೀಡದಿದ್ದರೂ ನೀರಾವರಿ ಯೋಜನೆಗಳ ಮುಂದುವರಿಕೆ : ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದ ಡಿಕೆಶಿ

Irrigation projects to continue despite no approval: DK Shivkumar challenge central government

ಬೆಂಗಳೂರು, ಡಿ.21- ಎತ್ತಿನಹೊಳೆ ನೀರಾವರಿ ಯೋಜನೆ ಮತ್ತು ಕಳಸ ಬಂಡೂರಿ ಅಣೆಕಟ್ಟೆ ನಿರ್ಮಾಣ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡದೆ ಇದ್ದರೂ ನಾವು ಕೆಲಸವನ್ನು ಮುಂದುವರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಡ್ಡು ಹೊಡೆದಿದ್ದಾರೆ.

ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ ನೀರು ಕೊಡದಿದ್ದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಜನ ನಮಗೆ ಹೊಡೆಯುತ್ತಾರೆ ಎಂದರು.

ಯೋಜನೆಯಿಂದ ತುಮಕೂರಿನವರೆಗೆ ನೀರು ತರಲೇಬೇಕಿದೆ. ಈ ವಿಚಾರವಾಗಿ ಇನ್ನು ಎಷ್ಟು ದಿನ ಕಾಯಲು ಸಾಧ್ಯ ? ನಾಳೆ ಕೇಂದ್ರ ಜಲ ಶಕ್ತಿ ಮತ್ತು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರನ್ನು ಭೇಟಿ ಮಾಡುತ್ತೇನೆ. ಎತ್ತಿನಹೊಳೆ ಹಾಗೂ ಕಳಸ ಬಂಡೂರಿ ಯೋಜನೆಗಳಿಗೆ ಪರಿಸರದ ಅನುಮತಿ ಕೊಡುವಂತೆ ಒತ್ತಾಯಿಸುತ್ತೇನೆ. ಅವರು ಯಾವುದಾದರೂ ಒಂದು ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದರೆ ನಾನು ಕೆಲಸ ಮುಂದುವರೆಸುತ್ತೇನೆ ಎಂದರು.

ಕೇಂದ್ರ ಜಲಶಕ್ತಿ ಸಚಿವರು ನದಿ ಜೋಡಣೆಗಳಿಗೆ ಸಂಬಂಧಪಟ್ಟಂತೆ ಕರೆ ಕರೆದಿರುವ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಭಾಗವಹಿಸಲು ನಾಳೆ ತಾವು ದೆಹಲಿಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು.

ಮೇಕೆದಾಟು ಸಮತೋಲಿತ ಅಣೆಕಟ್ಟೆ ನಿರ್ಮಾಣ ಯೋಜನೆಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿಸ್ತೃತ ಯೋಜನಾ ವರದಿ ಸಲ್ಲಿಕೆ ಸೇರಿದಂತೆ ಎಲ್ಲವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕಿದೆ. ಈ ವಿಚಾರವನ್ನು ಕೇಂದ್ರ ಸಚಿವರುಗಳ ಗಮನಕ್ಕೆ ತರುತ್ತೇವೆ ಎಂದರು.

ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮೆಟ್ರೋ ಯೋಜನೆಗೆ ಶೇ.50ರಷ್ಟು ಹಣ ನೀಡಬೇಕು ಎಂದು ಒತ್ತಡ ಹಾಕುತ್ತೇನೆ. ಯೋಜನೆಯ ಆರಂಭದಲ್ಲಿ ಶೇ.50ರಷ್ಟು ಪಾಲು ನೀಡುವುದಾಗಿ ಹೇಳಲಾಗಿತ್ತು. ಆದರೆ ಈಗ ಶೇ.12 ರಿಂದ 13 ರಷ್ಟು ಮಾತ್ರ ಹಣ ಬರುತ್ತಿದೆ. ಮೇಟ್ರೋ ಯೋಜನೆ ದಿನೇ ದಿನೇ ವಿಸ್ತರಣೆಯಾಗುತ್ತಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿದೆ. ಅದಕ್ಕಾಗಿ ಅರ್ಧದಷ್ಟು ಯೋಜನಾ ವೆಚ್ಚವನ್ನು ಕೇಂದ್ರ ಸರ್ಕಾರ ಹಂಚಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.

ಡಬಲ್‌ ಡೆಕ್ಕರ್‌ ನಿರ್ಮಾಣ, ಹೊಸ ಮಾರ್ಗಗಳು ನಿರ್ಮಾಣ, ಹೊಸಕೋಟೆ, ಬಿಡದಿ, ನೆಲಮಂಗಲ ಮತ್ತು ತಾವರೆಕೆರೆ ಸೇರಿದಂತೆ ವಿವಿಧ ಪ್ರದೇಶಗಳನ್ನು ಮೆಟ್ರೋ ಸಂಪರ್ಕಿಸಬೇಕು. ಅದಕ್ಕಾಗಿ ಕೇಂದ್ರದ ಪಾಲು ಹೆಚ್ಚಾಗಬೇಕು ಎಂದು ಹೇಳಿದರು.

RELATED ARTICLES

Latest News