Thursday, November 21, 2024
Homeಸಂಪಾದಕೀಯ-ಲೇಖನಗಳು`ಅಭಿಮಾನಿ ದೇವರು'ಗಳ ದೇವರು ಅಣ್ಣಾವ್ರು

`ಅಭಿಮಾನಿ ದೇವರು’ಗಳ ದೇವರು ಅಣ್ಣಾವ್ರು

ಅಭಿಮಾನಿಗಳನ್ನುದೇವರುಗಳೇ’ ಎಂದು ಸಂಬೋಸಿದ್ದು ಬಹುಶಃ ಭಾರತೀಯ ಚಿತ್ರರಂಗದಲ್ಲಿ ವರನಟ ಡಾ.ರಾಜ್ಕುಮಾರ್ ಅವರೊಬ್ಬರೇ ಎಂದರೆ ಅತಿಶಯವೆನಿಸದು. ಅಭಿಮಾನಿಗಳು ರಾಜ್ ಪಾಲಿಗೆ ದೇವರಂತೆ ಕಂಡರೆ ಅಭಿಮಾನಿಗಳಿಗೂ ಅಣ್ಣಾವ್ರೇ ದೇವರಂತಿದ್ದರು.ರಾಜ್ ಚಿತ್ರಗಳ ಸಂಪೂರ್ಣ ಸಾಫಲ್ಯ, ಗೋಕಾಕ್ ವರದಿ ಚಳವಳಿಗೆ ರಾಜ್ ಸಾರಥ್ಯದಲ್ಲಿ ದೊರೆತ ಯಶಸ್ಸು ಮುಂತಾದವು ಇದನ್ನು ಪುಷ್ಟೀಕರಿಸುತ್ತವೆ.

ಬಹುತೇಕ ಅಭಿಮಾನಿಗಳು ಡಾ.ರಾಜ್ಕುಮಾರ್ ಅವರನ್ನು ಯಾವ ಪರಿಯಲ್ಲಿ ಪ್ರೀತಿಸುತ್ತಿದ್ದರೆಂದರೆ ಅವರ ಚಿತ್ರ ಹೇಗೆಯೇ ಇರಲಿ, ಅವರು ತೆರೆಯ ಮೇಲೆ ಬಂದು ಹೋದರೆ ಸಾಕು ಎಂದು ಹಂಬಲಿಸುತ್ತಿದ್ದರು. ರಾಜ್ ಚಿತ್ರಗಳಲ್ಲಿ ಹೆಚ್ಚಿನ ಸಾಮಾಜಿಕ ಕಳಕಳಿಯ ಪಾತ್ರವೇ ಹೆಚ್ಚು. ಇದು ಅಭಿಮಾನಿಗಳಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ಅದರಂತೆಯೇ ನಡೆದುಕೊಳ್ಳುತ್ತಿದ್ದರು. ಇದಕ್ಕೆ ಬಂಗಾರದ ಮನುಷ್ಯ ಚಿತ್ರವೇ ಸಾಕ್ಷಿ. ತಮ್ಮ ನೆಚ್ಚಿನ ನಟನನ್ನು ಪ್ರತಿ ಫ್ರೇಮ್ನಲ್ಲೂ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಇದೆಂದೇ ಅವರು ಭಾವಿಸುತ್ತಿದ್ದರು.

ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೃಷ್ಟಿಸಿದ ಡಾ.ರಾಜ್:
ಆಗೆಲ್ಲಾ ಈಗಿನಂತೆ ಮೊಬೈಲ್ ಆಗಲಿ, ಸಾಮಾಜಿಕ ಜಾಲತಾಣಗಳಾಗಲಿ ಇರಲಿಲ್ಲ. ರಂಜನೆಗೆ ನಾಟಕಗಳು, ಸಿನಿಮಾಗಳು, ಹರಿಕಥಾ ಕಾಲಕ್ಷೇಪ, ವಾದ್ಯಗೋಷ್ಠಿ, ಸುಗಮ ಸಂಗೀತ, ಶಾಸ್ತ್ರೀಯ ನೃತ್ಯ, ಸಂಗೀತ ಕಛೇರಿಗಳು ಇವೇ ಆಗ ಪ್ರಾಮುಖ್ಯ ಪಡೆದಿದ್ದವು. ರಾಜ್ ಯುಗದಲ್ಲಿ ಅಷ್ಟಾಗಿ ಮಲ್ಟಿಪ್ಲೆಕ್ಸ್ಗಳ ಭರಾಟೆ ಇರಲಿಲ್ಲ.

ಸಿಂಗಲ್ ಸ್ಕ್ರೀನ್ ಥಿಯೇಟರ್ಗಳದ್ದೇ ಪಾರುಪತ್ಯ. ಬೆಂಗಳೂರಿನ ಸುಮಾರು ಹತ್ತು ಚಿತ್ರಮಂದಿರಗಳಲ್ಲಿ ಮತ್ತು ರಾಜ್ಯದಾದ್ಯಂತದ ನೂರಾರು ಚಿತ್ರಮಂದಿರಗಳಲ್ಲಿ ರಾಜ್ ಚಿತ್ರ ಬಿಡುಗಡೆಯಾದರೆ ಮೊದಲ ವಾರ ಎಲ್ಲ ಷೋ ಹೌಸ್ಫುಲ್ ಆಗಿರುತ್ತಿತ್ತು. ಬೆಂಗಳೂರಿನ ಎಲ್ಲ ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ ಖಾತ್ರಿಯಾಗಿತ್ತು. ಅಣ್ಣಾವ್ರ ಬಹುತೇಕ ಸಿನಿಮಾಗಳು ಶತದಿನೋತ್ಸವ ಆಚರಿಸಿಕೊಳ್ಳುತ್ತಿದ್ದವು. ಈಗಿನಂತೆ ಆಗ ಒಂದೆರಡು ವಾರಗಳಲ್ಲೇ ಸಿನಿಮಾದ ಗಳಿಕೆಯನ್ನು ಲೆಕ್ಕ ಹಾಕುತ್ತಿರಲಿಲ್ಲ.

ಎಷ್ಟೋ ಕಡೆ ಚಿತ್ರಮಂದಿರಗಳಿಗೆ ಎತ್ತಿನ ಗಾಡಿಗಳಲ್ಲಿ ಜನರು ಗುಂಪುಗುಂಪಾಗಿ ಬಂದು ಸಿನಿಮಾ ವೀಕ್ಷಿಸುತ್ತಿದ್ದರು. ರಾಜ್ ತೆರೆಯ ಮೇಲೆ ಬಂದರೆ ಶಿಳ್ಳೆ, ಹಷೋದ್ಗಾರ, ಚಪ್ಪಾಳೆಗಳ ಸುರಿಮಳೆ! ಚಿತ್ರಮಂದಿರಗಳ ಮುಂದೆ ಕಟೌಟ್ಗಳನ್ನು ಹಾಕುವ ಪರಿಪಾಠ ಆರಂಭವಾದ ಸಮಯದಲ್ಲೇ ಚಿತ್ರಮಂದಿರದ ಸುತ್ತ ನಕ್ಷತ್ರಗಳನ್ನು ಹಾಕುವುದು ಶುರುವಾಯಿತು. ರಾಜ್ರ ಒಂದು ಸಿನಿಮಾಕ್ಕೆ ಪ್ರತೀ ಥಿಯೇಟರ್ನ ಮುಂದೆ 100 ಕ್ಕೂ ಅಧಿಕ ನಕ್ಷತ್ರಗಳನ್ನು ಕಟ್ಟಿದ್ದರು.

ರಾಜ್ ಚಿತ್ರವನ್ನು ಮೊದಲ ದಿನವೇ ವೀಕ್ಷಿಸಬೇಕೆಂಬ ಹಂಬಲ ಅಭಿಮಾನಿಗಳಿಗೆ. ಇದರಿಂದಾಗಿ ಚಿತ್ರ ಬಿಡುಗಡೆಯಾದ ದಿನ ನೂಕುನುಗ್ಗಲು, ಅಸಾಧ್ಯ ಜನಜಂಗುಳಿ. ಮುಂದೆ ಈ ಜನಸಂದಣಿ ಹೆಚ್ಚುತ್ತಲೇ ಹೋಗಿ ರಾಜ್ ಚಿತ್ರಗಳ ಥಿಯೇಟರ್ಗಳ ಮುಂದೆ ಪೊಲೀಸ್ ಬಂದೋಬಸ್ತ್ ಏರ್ಪಡಿಸುವುದು ಸರ್ವೇಸಾಮಾನ್ಯವಾಯಿತು.

ಅಭಿಮಾನಿಗಳ ಪಾಲಿನ ಅಣ್ಣಾವ್ರು:
ಅಭಿಮಾನಿಗಳು ಡಾ.ರಾಜ್ರನ್ನು ಪ್ರೀತಿಯಿಂದ ಅಣ್ಣಾವ್ರು'ಎಂದು ಕರೆದರು. ರಾಜ್ ಎಷ್ಟೇ ಮೇರು ನಟರಾಗಿ ದ್ದರೂ ಅವರ ನಮ್ರ ಸ್ವಭಾವ ಅನ್ಯರಿಗೆ ಮಾದರಿಯಾಗಿತ್ತು. ಅವರು ಬಹು ಜನಪ್ರಿಯರಾಗಿದ್ದಂತೆಯೇ ಭೋಜನಪ್ರಿಯರೂ ಆಗಿದ್ದರು. ಅನ್ನಕ್ಕೆ ಬಹಳ ಭಕ್ತಿ-ಗೌರವಗಳನ್ನು ತೋರಿಸುತ್ತಿದ್ದರು. ಪಂಕ್ತಿಯಲ್ಲಿ ಕುಳಿತು ಸಹಭೋಜನ ಮಾಡು ವುದನ್ನು ಇಷ್ಟಪಡುತ್ತಿದ್ದರು. ಊಟ ವಾದ ಬಳಿಕ ಸೋಪಿನಿಂದ ಕೈ ತೊಳೆದುಕೊಳ್ಳುತ್ತಿರಲಿಲ್ಲ. ಆಗಾಗ ಕೈಯನ್ನು ಮೂಸಿ ನೋಡುತ್ತಾಆಹಾ! ಏನು ಊಟ ಹಾಕಿಸಿದೆಯಪ್ಪಾ’ ಎಂದು ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರಂತೆ. ಇಂಥ ಸಜ್ಜನಿಕೆ ಎಷ್ಟು ಮಂದಿಯಲ್ಲಿ ಕಾಣಲು ಸಾಧ್ಯ?

ಅಪಾರ ದೈವಭಕ್ತರು:
ರಾಜ್ ಅಪಾರ ದೈವಭಕ್ತರಾಗಿದ್ದರು. ಶಬರಿಮಲೆ ಶ್ರೀ ಸ್ವಾಮಿ ಅಯ್ಯಪ್ಪ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅಸೀಮ ಭಕ್ತಿ ಹೊಂದಿದ್ದರು. ಶಬರಿ ಮಲೆಗೆ ಹತ್ತಾರು ವರ್ಷ ಯಾತ್ರೆ ಕೈಗೊಂಡಿದ್ದರು. ಗುರುರಾಯರ ಭಕ್ತಿ ಪಾರವಶ್ಯದಿಂದಾಗಿ ರಾಯರ ಭಕ್ತಿಗೀತೆಗಳನ್ನು ಅತ್ಯಂತ ಭಾವ ತುಂಬಿ ಹಾಡಿದ್ದಾರೆ. ಮಂತ್ರಾಲಯದ ಶ್ರೀ ಮಠದಲ್ಲಿ ದಶಕಗಳ ಕಾಲ ರಾಜ್ ಹಾಡಿದ ಭಕ್ತಿಗೀತೆಗಳನ್ನೇ ಮುಂಜಾನೆ ಪ್ರಸಾರ ಮಾಡಲಾಗುತ್ತಿತ್ತು. `ಮಂತ್ರಾಲಯ ಮಹಾತ್ಮೆ’ ಚಿತ್ರದಲ್ಲಿ ರಾಯರ ಪಾತ್ರ ವಹಿಸುವ ಅವಕಾಶ ಪ್ರಾಪ್ತವಾದಾಗ ವ್ರತ ನಿಷ್ಠರಾಗಿದ್ದುಕೊಂಡು ಚಿತ್ರ ಪೂರೈಸಿದರು.

ಗಾಯನದಲ್ಲೂ ಜನಪ್ರಿಯತೆ:
ಗಾಯನ ಪ್ರತಿಭೆ ರಾಜ್ರ ಮತ್ತೊಂದು ಗರಿಮೆ. ಆಕಾಶವಾಣಿಯ `ನಿಮ್ಮ ಮೆಚ್ಚಿನ ಚಿತ್ರಗೀತೆಗಳ’ ಕಾರ್ಯಕ್ರಮದಲ್ಲಿ ಅರ್ಧದಷ್ಟು ಹಾಡುಗಳು ರಾಜ್ ಹಾಡಿರುವಂಥವೇ ಆಗಿರುತ್ತಿದ್ದವು. ಇದು ಅವರು ಗಾಯನದಲ್ಲೂ ಗಳಿಸಿದ್ದ ಜನಪ್ರಿಯತೆಗೆ ನಿದರ್ಶನ.
ರಾಜ್ ನಿಧನರಾದಾಗ ಕುಟುಂಬದವ ರಿಗಿಂತ ಅಭಿಮಾನಿಗಳೇ ಮುಂದಾಗಿ ಅವರ ಅಂತ್ಯಸಂಸ್ಕಾರ ಮಾಡಿದರು. ಜನಜಂಗುಳಿ ಕಡಿಮೆಯಾದ ಬಳಿಕ ಕುಟುಂಬದವರು ಶಾಸ್ತ್ರೋಕ್ತ ವಿ-ವಿಧಾನಗಳನ್ನು ಪೂರೈಸಿದರು.

ಸೂರ್ತಿಯ ಸಾಕಾರಮೂರ್ತಿ:
ರಾಜ್ ನಟನೆಯ ಸೂರ್ತಿ ಯಿಂದ ಅಭಿನಯ ರಂಗಕ್ಕೆ ಧುಮುಕಿದವರೆಷ್ಟೋ! ರಾಜ್ ಯೋಗ ಸಾಧನೆಯ ಪ್ರಭಾವದಿಂದ ಯೋಗಾಭ್ಯಾಸ ಆರಂಭಿಸಿದವರೆಷ್ಟೋ! ರಾಜ್ ಚಿತ್ರಗಳ ಪ್ರಭಾವದಿಂದ ಬೇಸಾಯಕ್ಕೆ ಮರಳಿದವರೆಷ್ಟೋ! ರಾಜ್ ವ್ಯಕ್ತಿತ್ವದ ಪ್ರೇರಣೆಯಿಂದ ಕುಡಿತದಂತಹ ವ್ಯಸನಗಳನ್ನು ತ್ಯಜಿಸಿದವರೆಷ್ಟೋ !
ಒಟ್ಟಿನಲ್ಲಿ ಡಾ.ರಾಜ್ಕುಮಾರ್ ಅಭಿಮಾನಿ ದೇವರುಗಳ ಪಾಲಿಗೆ ದೈವಸದೃಶವಾಗಿದ್ದರು ಎನ್ನುವುದರಲ್ಲಿ ಸಂದೇಹವಿಲ್ಲ.

  • ಸನ್ಮಿತ್ರ
RELATED ARTICLES

Latest News