ತಿರುಚಿರಾಪಳ್ಳಿ,ಏ.13- ತಮಿಳುನಾಡಿನಲ್ಲಿ ಲೋಕಸಭೆ ಮತದಾನಕ್ಕೂ ಮುನ್ನ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಡರಾತ್ರಿ ತಿರುಚಿರಾಪಳ್ಳಿಯ ಎತ್ತರೈ ಗ್ರಾಮದ ಮನೆಯೊಂದರಿಂದ ರೂ.1 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಿರುಚಿರಾಪಳ್ಳಿಯ ಎತ್ತರೈ ಗ್ರಾಮದ ಮನೆಗೆ ನುಗ್ಗಿ ಪರಿಶೀಲನೆ ನಡೆಸಿದ್ದು, ಬ್ಯಾಗ್‍ನಲ್ಲಿ ತುಂಬಿದ್ದ ರೂ.1 ಕೋಟಿ ಮೌಲ್ಯದ ನೋಟುಗಳು ಪತ್ತೆಯಾಗಿವೆ. ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರದೀಪ್‍ಕುಮಾರ್ ತಿಳಿಸಿದ್ದಾರೆ.
ತಿರುಚ್ಚಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಬಂದಿದ್ದು, ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದರು. ಮನೆಯೊಂದರಲ್ಲಿ ಕರೆನ್ಸಿ ನೋಟುಗಳನ್ನು ಇಟ್ಟಿರುವ ಬಗ್ಗೆ ಮಾಹಿತಿ ಪಡೆದ ಚುನಾವಣಾ ಫ್ಲೈ ಸ್ಕ್ವಾಡ್ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಒಂದು ಕೋಟಿ ರೂ. ವಶಪಡಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇಷ್ಟೊಂದು ದೊಡ್ಡ ಮೊತ್ತದ ನಗದನ್ನು ಮನೆಯಲ್ಲಿ ಇಟ್ಟಿರುವವರು ಯಾರು ಮತ್ತು ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಅದನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆಯೇ ಎಂಬ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಸಾರ್ವತ್ರಿಕ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.ಜೂನ್ 4 ರಂದು ಮತ ಎಣಿಕೆ ನಿಗದಿಯಾಗಿದೆ.