Homeರಾಜ್ಯಹಾಲಿನ ದರ ಏರಿಕೆ ಖಂಡಿಸಿ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಹಾಲಿನ ದರ ಏರಿಕೆ ಖಂಡಿಸಿ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಬೆಂಗಳೂರು,ನ.2- ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಏರಿಕೆ ಮಾಡಿರುವ ಕಾಂಗ್ರೆಸ್‌‍ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ನಗರದ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳಾ ಕಾರ್ಯಕರ್ತೆಯರು ಕೈಯಲ್ಲಿ ಹಾಲಿನ ಪ್ಯಾಕೆಟ್‌ಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಲಿನ ದರ ಏರಿಸಿರುವ ಕಾಂಗ್ರೆಸ್‌‍ ಸರ್ಕಾರಕ್ಕೆ ಧಿಕ್ಕಾರ, ಕಾಂಗ್ರೆಸ್‌‍ನ ಬೆಲೆ ಏರಿಕೆ ನಿಲ್ಲಲಿ, ನಾಡಿನಿಂದ ಸರ್ಕಾರ ತೊಲಗಲಿ ಎಂಬ ಘೋಷಣೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್‌‍ ಸರ್ಕಾರ ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಬಾರಿ ಹಾಲಿನ ದರ ಏರಿಕೆ ಮಾಡಿದೆ. ಹಾಲಿನ ಜೊತೆಗೆ ಮೊಸರಿನ ದರವನ್ನೂ ಹೆಚ್ಚಿಸಲಾಗಿದೆ. ಜನಸಾಮಾನ್ಯರು ಬದುಕುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಜನರಿಗೆ ಸರ್ಕಾರ ನೀಡಿದ ಕೊಡುಗೆ ಏನು? ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ಹೆಚ್ಚಿಸಿರುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ನೀರಿಗೆ ದುಡ್ಡು ಕೊಡುತ್ತೇವೆ, ಹಾಲಿಗೆ ದುಡ್ಡು ಕೊಡುವುದಿಲ್ಲವೇ ಎಂದು ಸಚಿವ ಕೃಷ್ಣ ಬೈರೇಗೌಡರು ಪ್ರಶ್ನಿಸಿದ್ದಾರೆ. ಹಾಗಾದರೆ ಯಾವುದರ ಬೆಲೆಯನ್ನು ಏರಿಸುವುದನ್ನು ಬಿಟ್ಟಿದ್ದೀರಿ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಸರ್ಕಾರ ರೈತರ ಹಿತ ಕಾಪಾಡುವ ಬದಲು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ರೈತರಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಸರ್ಕಾರದ ಖಜಾನೆಯಲ್ಲಿರುವ ಹಣವನ್ನು ರೈತರಿಗೆ ನೀಡಬೇಕು. ರೈತರನ್ನು ಕಾಪಾಡುವುದು ನಮೆಲ್ಲರ ಧರ್ಮ. ಆದರೆ ಸರ್ಕಾರ ಗೋರಕ್ಷಣೆ ಮಾಡುತ್ತಿಲ್ಲ, ಭಕ್ಷಣೆ ಮಾಡುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಸ್‌‍ಗಳ ದುರಸ್ತಿಗೆ ಹಣವಿಲ್ಲ, ಡೀಸೆಲ್‌ ಖರೀದಿಗೂ ಹಣವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಬಿಯರ್‌ ಸೇರಿದಂತೆ ಮದ್ಯದ ದರಗಳನ್ನೂ ಹೆಚ್ಚಿಸಲಾಗಿದೆ. ಯಾವ ವಸ್ತುವಿನ ಬೆಲೆ ಏರಿಸುವುದನ್ನು ಸರ್ಕಾರ ಬಿಟ್ಟಿದೆ ಎಂಬುದನ್ನು ತಿಳಿಸಲಿ. ಯಾವ ಮೂಲದಿಂದ ಹಣ ಬರುತ್ತದೆ ಎಂಬುದರ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಐದು ಕೋಟಿ ರೂಪಾಯಿ ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಲೆಕ್ಕ ನೀಡಿಲ್ಲ ಎಂದ ಅವರು, ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಮುಳುಗಿಹೋಗುತ್ತಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಡಳಿತದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಜನರು ನೆಮ್ಮದಿಯ ಜೀವನ ನಡೆಸುವ ಪರಿಸ್ಥಿತಿ ಇಲ್ಲವಾಗಿದೆ ಎಂದರು.

ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಸದ್ಯ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಹಾಲಿನ ದರ ಏರಿಕೆ ಹಿಂಪಡೆಯುವವರೆಗೂ ನಮ ಹೋರಾಟ ನಿಲ್ಲುವುದಿಲ್ಲ. ಅಗತ್ಯ ಬಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತೆಯರು ಪಾಲ್ಗೊಂಡು ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News