ಬೆಂಗಳೂರು,ನ.2- ಸ್ಟಿಂಗ್ ಆಪರೇಷನ್ ಆರೋಪದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಕೊಟ್ಟು ಸರ್ಕಾರ ಉಳಿಸಿಕೊಳ್ಳಲು ನಡೆಸುತ್ತಿರುವ ತನಿಖೆಯಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಆರೋಪದ ವಿಚಾರ ನಮ ದೆಹಲಿಯ ನಿವಾಸಕ್ಕೆ ಲಿಂಕ್ ಆಗಿದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ದೆಹಲಿಯ ನಿವಾಸದಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ ಎಂಬ ವಿಚಾರವನ್ನು ನೀಡಿದವರು ಯಾರು? ಎಂದು ಪ್ರಶ್ನಿಸಿದರು.
ಸ್ಟಿಂಗ್ ಆಪರೇಷನ್ ಆರೋಪವನ್ನು ಇನ್ನೊಬ್ಬರ ತಲೆಗೆ ಕಟ್ಟುವುದು ಈಗಲೂ ಸಾಧ್ಯವಿಲ್ಲ, ಮುಂದೆಯೂ ಸಾಧ್ಯವಿಲ್ಲ. ತಾಂತ್ರಿಕ ಸಾಕ್ಷಿಗಳಿದ್ದರೆ ಪೂಜೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.ಗೃಹಸಚಿವ ಪ್ರಿಯಾಂಕ್ ಖರ್ಗೆಯವರು ಟ್ರೈಲರ್ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ನಾನು ಉತ್ತಮ ಸಿನಿಮಾಗಳನ್ನು ಮಾಡಿದ್ದೇನೆ. ಇಂತಹ ಸಿನಿಮಾಗಳನ್ನು ಮಾಡಿಲ್ಲ. ಈಗಲೂ ತನಿಖೆಗೆ ಸಿದ್ಧ. ತನಿಖೆ ನಡೆಸಿ ಎಂದು ಸವಾಲು ಹಾಕಿದರು.
ನಗರ ಪೊಲೀಸ್ ಆಯುಕ್ತರು ದೆಹಲಿಯ ನಮ ನಿವಾಸದಲ್ಲಿ ಮೊಬೈಲ್ ಹಸ್ತಾಂತರವಾಗಿದೆ ಎಂಬ ಆರೋಪ ಮಾಡಿದ್ದಾರೆ. ಆ ಮೂಲಕ ಸುಪ್ರಿಂಕೋರ್ಟ್ನ ಸೂಚನೆಯನ್ನು ಉಲ್ಲಂಘಿಸಿದ್ದಾರೆ. ತನಿಖಾ ಹಂತದಲ್ಲಿ ಮಾಹಿತಿ ಸೋರಿಕೆ ಮಾಡುವುದು ಕಾನೂನು ಬಾಹಿರ ಎಂದು ಅವರು ಹೇಳಿದರು.
ರಾಜ್ಯೋತ್ಸವದ ಸುದ್ದಿಗಿಂತ ಸ್ಟಿಂಗ್ ವಿಚಾರದ ಸುದ್ದಿಯೇ ಪ್ರಮುಖವಾಗಿದೆ. ಅದರ ಬಗ್ಗೆ ಹಲವಾರು ವ್ಯಾಖ್ಯಾನಗಳು ಬಂದಿವೆ. ಪೊಲೀಸ್ ಆಯುಕ್ತರು ಹೇಳಿರುವ ಆರೋಪಿಯ ವಿಳಾಸ ಉತ್ತರ ಪ್ರದೇಶದ ಗಾಜಿಯಾಬಾದ್ಗೆ ಸಂಬಂಧಿಸಿದೆ. ಆತನ ವಿಳಾಸ ನಮ ಮನೆಯಲ್ಲಿಲ್ಲ ಎಂದು ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿಗೆ ಸಂಬಂಧಿಸಿದ್ದು ಎನ್ನಲಾದ ಸ್ಟಿಂಗ್ ಆಪರೇಷನ್ ಉದ್ದೇಶಪೂರಕ ಸೃಷ್ಟಿ. ಘಟನೆ ನಡೆದಿಲ್ಲ. ಸಾಕ್ಷಿಗಳು ದೃಢಪಟ್ಟಿಲ್ಲ ಎಂದು ಕ್ಲೀನ್ ಚಿಟ್ ನೀಡಿದ್ದಾರೆ. ಇದರಿಂದ ಸ್ಪಷ್ಟವಾಗುವುದು ಮಾಜಿ ಮುಖ್ಯಮಂತ್ರಿಗೆ ಕ್ಲೀನ್ ಚಿಟ್ ನೀಡುವುದು, ವಿಡಿಯೋ ಮಾಡಿಸಿದವರಿಗೆ ರಕ್ಷಣೆ ಕೊಡಲು ನಡೆಯುತ್ತಿರುವ ತನಿಖೆಯಾಗಿದೆ ಎಂದು ಆರೋಪಿಸಿದರು.
ನೋಟಿಸ್ ಕೊಡದೆ ನನ್ನ ಎಡಬಲದವರು ಓಡಿಹೋಗಿದ್ದಾರೆ ಎಂದು ಆರೋಪಿಸಿದರೆ ಹೇಗೆ? ಜೆಡಿಎಸ್ ಸಾಮಾಜಿಕ ಮಾಧ್ಯಮದ ಅಧ್ಯಕ್ಷ ಚಂದನ್ ಮತ್ತು ಮೋಹನ್ಗೌಡರು ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿಯವರೆಗೆ ಪೊಲೀಸ್ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಅವರ್ಯಾರೂ ನ್ಯಾಯಾಲಯದಲ್ಲಿ ಅರ್ಜಿ ಹಾಕಿಲ್ಲ. ಸ್ಟಿಂಗ್ ಆಪರೇಷನ್ ಮಾಡಿರುವ ಆರೋಪ ಹೊತ್ತಿರುವ ವ್ಯಕ್ತಿ ನ್ಯಾಯಾಲಯದಲ್ಲಿ ಮೂರು ಅರ್ಜಿಗಳನ್ನು ಹಾಕಿದ್ದಾರೆ ಎಂದು ಹೇಳಿದರು.
ಮೋಹನ್ಗೌಡ ಅವರ ಮನೆಗೆ ಹೋಗಿದ್ದಾಗ ಇನ್್ಸಸ್ಪೆಕ್ಟರ್ರೊಬ್ಬರ ಬ್ರೇಸ್ಲೆಟ್ ಕಳೆದುಹೋಯಿತು ಎಂದು ಎಫ್ಐಆರ್ ಹಾಕಿದ್ದಾರೆ. ಮರುದಿನ ಅದನ್ನು ಹಿಂದಿರುಗಿಸಿದ್ದರ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, 12 ವರ್ಷದ ಹಿಂದಿನ ಘಟನೆಯನ್ನು 2023 ರಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಸತ್ಯಾಸತ್ಯತೆ ಏನು? ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆಯಾಗಿದ್ದ ಕೃಪಾ ಆಳ್ವ ಎಂಬುವವರಿಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಆರೋಪದ 14 ವರ್ಷದ ಹೆಣ್ಣುಮಗಳು ಮಾಡಿದ್ದ ಇ-ಮೇಲ್ ವಿಚಾರ ಏನಾಯಿತು? ಆ ಹೆಣ್ಣುಮಗಳಿಗೂ ಹಾಗೂ ಕಾಂಗ್ರೆಸ್ ಮುಖಂಡರಿಗೂ ಏನು ಸಂಬಂಧ? ಆ ಹೆಣ್ಣುಮಗಳನ್ನು ಕರೆಸಿ ವಿಚಾರಣೆ ಮಾಡಿ ಏನು ಮಾಡಿದಿರಿ? ಎಷ್ಟು ಹಣ ಕೊಟ್ಟಿದ್ದೀರಿ? ಈಗ ಅವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರೇ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಅಧಿಕಾರದಲ್ಲಿದ್ದಾಗ ವಿಧಾನಸಭೆಯಲ್ಲಿ ಸ್ಟಿಂಗ್ ಆಪರೇಷನ್, ಫೋನ್ಟ್ರ್ಯಾಪ್ ವಿಚಾರಕ್ಕೆ ಒಂದು ಗಂಟೆ ಮಾತನಾಡಿ ನಿಷ್ಪಕ್ಷಪಾತ, ಪ್ರಾಮಾಣಿಕ ತನಿಖೆಯಾಗಬೇಕು ಎಂದು ಹೇಳಿದ್ದಾರೆ ಎಂದು ಅವರ ಭಾಷಣದ ತುಣುಕುಗಳನ್ನು ಕೇಳಿಸಿದರು.
ಆದರೆ ಈಗ ಯಾವ ರೀತಿಯ ತನಿಖೆ ನಡೆಯುತ್ತಿದೆ? ವಶಪಡಿಸಿಕೊಂಡಿರುವ ಮೊಬೈಲ್ಗಳು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿ ಬರುವ ಮುನ್ನವೇ ತರಾತುರಿಯಲ್ಲಿ ಹೇಗೆ ಈ ವಿಚಾರವನ್ನು ಪೊಲೀಸ್ ಆಯುಕ್ತರಿಂದ ಹೇಳಿಸಿದ್ದಾರೆ ಎಂದರು.
ಹೋರಾಟ, ಯಾವುದೇ ವ್ಯಕ್ತಿಯ ತೇಜೋವಧೆ ಮಾಡುವ ಅಥವಾ ವರ್ಚಸ್ಸು ಕುಗ್ಗಿಸುವುದಕ್ಕಲ್ಲ. ಸ್ಟಿಂಗ್ ಆಪರೇಷನ್ ಮಾಡಿ ಅಧಿಕಾರಿಗಳು, ರಾಜಕಾರಣಿಗಳನ್ನು ಬ್ಲಾಕ್ಮೇಲ್ ಮಾಡುವವರ ವಿರುದ್ಧ ಕ್ರಮವಾಗಬೇಕು. ಅದಕ್ಕಾಗಿ ಜನರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ ಎಂದರು.
ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ನಂತರ ಮುಖ್ಯಮಂತ್ರಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರ ಮೂಲಕ ಕೇಂದ್ರ ಸಚಿವರ ಮನೆಯ ಲಿಂಕ್ ಇದೆ ಎಂಬುದನ್ನು ಹೇಳಿಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ತಮಣ್ಣ, ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕರಾದ ಅನ್ನದಾನಿ, ರಮೇಶ್ಗೌಡ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ಗೆ ಸದಸ್ಯರಾಗಿ ಚುನಾಯಿತರಾಗಿರುವ ಎ.ಪಿ.ರಂಗನಾಥ, ಮುಖಂಡರಾದ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
