Homeರಾಜ್ಯಸ್ಟಿಂಗ್‌ ಆಪರೇಷನ್‌ ಪ್ರಕರಣ : ಮಹಜರಿಗೆ ಸಿಸಿಬಿ ಪೊಲೀಸರ ಸಿದ್ಧತೆ

ಸ್ಟಿಂಗ್‌ ಆಪರೇಷನ್‌ ಪ್ರಕರಣ : ಮಹಜರಿಗೆ ಸಿಸಿಬಿ ಪೊಲೀಸರ ಸಿದ್ಧತೆ

ಬೆಂಗಳೂರು,ನ.2- ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಲು ತಯಾರಿ ನಡೆಸುತ್ತಿದ್ದಾರೆ.

ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣ ತಂಡದ ಸದಸ್ಯ ಪ್ರಜ್ವಲ್‌ ಪ್ರಸಾದ್‌ ಸೂಚನೆ ಮೇರೆಗೆ ರಿತೀಶ್‌ ಪಾಂಡೆ ಮತ್ತು ಆತನ ಸಹಚರ ವಿನೋದ್‌ ಶರ್ಮಾ ದೆಹಲಿಯ ಕರೋಲ್‌ ಬಾಗ್‌ ಅಂಗಡಿಯಲ್ಲಿ ಮೊಬೈಲ್‌ಗಳನ್ನು ಖರೀದಿಸಿದ್ದಾರೆ ಎಂದು ಹೇಳಿದರು.

ಈ ಮೊಬೈಲ್‌ಗಳನ್ನು ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ರಿತೀಶ್‌ ಪಾಂಡೆ ಅವರು ಪ್ರಜ್ವಲ್‌ ಪ್ರಸಾದ್‌ ಅವರಿಗೆ ಹಸ್ತಾಂತರಿಸಿದರು ಎಂಬುವುದು ನಮ ಸಿಸಿಬಿ ಪೊಲೀಸರ ತನಿಖಾ ತಂಡದಿಂದ ಗೊತ್ತಾಗಿದೆ ಎಂದು ಹೇಳಿದರು.

ಈ ಮೊಬೈಲ್‌ಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎನ್ನಲಾದ ಸ್ಟಿಂಗ್‌ ವಿಡಿಯೋಗಳನ್ನು ಅಪ್ಲೋಡ್‌ ಮಾಡಲಾಗಿದೆ. ಇವರಿಗೆ ಈ ವಿಡಿಯೋಗಳನ್ನು ಅಪ್ಲೋಡ್‌ ಮಾಡಲು ಹೇಳಿದವರು ಯಾರು ಎಂಬುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದರು.

ರಿತೀಶ್‌ ಪಾಂಡೆಯನ್ನು ದೆಹಲಿಯಲ್ಲಿ ಬಂಧಿಸಿ, ನಗರಕ್ಕೆ ಕರೆ ತಂದು ವಿಚಾರಣೆ ನಡೆಸಿದಾಗ ಅವರು ಕೆಲವು ಮಾಹಿತಿಯನ್ನು ನೀಡಿದ್ದಾರೆ. ಆ ಬಗ್ಗೆಯೂ ಸಹ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಆಯುಕ್ತರು ಹೇಳಿದರು.ರಿತೀಶ್‌ ಪಾಂಡೆ ಮತ್ತು ಪ್ರಜ್ವಲ್‌ ಪ್ರಸಾದ್‌ ನಡುವೆ ಹಣಕಾಸಿನ ವಹಿವಾಟು ನಡೆದಿರುವುದನ್ನು ನಮ ತನಿಖಾ ತಂಡಗಳು ಪತ್ತೆಹಚ್ಚಿವೆ ಎಂದು ಅವರು ತಿಳಿಸಿದರು.ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಸಿಸಿಬಿ ಪೊಲೀಸರು ಸದ್ಯದಲ್ಲೇ ಮಹಜರು ನಡೆಸಲಿದ್ದಾರೆ.

RELATED ARTICLES

Latest News