Homeರಾಜ್ಯದೆಹಲಿಯಲ್ಲಿ ಸಿದ್ದರಾಮಯ್ಯ - ವೇಣುಗೋಪಾಲ್‌ ಭೇಟಿ

ದೆಹಲಿಯಲ್ಲಿ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ

ಬೆಂಗಳೂರು, ನ.2- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.ಇಂಡಿ ಕೂಟದಿಂದ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ತೆರಳಿದ್ದ ಸಿದ್ದರಾಮಯ್ಯ ಅವರು, ನಿನ್ನೆ ರಾಹುಲ್‌ ಗಾಂಧಿಯವರನ್ನು ಔಪಚಾರಿಕವಾಗಿ ಭೇಟಿ ಮಾಡಿದ್ದರು. ಇಂದು ಮಧ್ಯಾಹ್ನ ಅಧಿಕೃತವಾಗಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಬೆಳಗ್ಗೆ ಸಚಿವ ಡಾ.ಯತೀಂದ್ರ, ಶಾಸಕರಾದ ಎ.ಎಸ್‌‍.ಪೊನ್ನಣ್ಣ, ಕೆ.ವೆಂಕಟೇಶ್‌, ವಿಧಾನಪರಿಷತ್‌ ಸದಸ್ಯರಾದ ನಾಗರಾಜ್‌ ಯಾದವ್‌, ಶಿವಕುಮಾರ್‌ ಸೇರಿದಂತೆ ಹಲವರ ಜೊತೆ ವೇಣುಗೋಪಾಲ್‌ ಮಾತುಕತೆ ನಡೆಸಿದರು.ಕಾಂಗ್ರೆಸ್‌‍ನ ವರಿಷ್ಠ ನಾಯಕರ ಜೊತೆ ಭೇಟಿಯ ವೇಳೆ, ಸ್ಟಿಂಗ್‌ ಆಪರೇಷನ್‌ ಬಗ್ಗೆ ಹಾಗೂ ರಾಜ್ಯ ರಾಜಕಾರಣದ ಬಗ್ಗೆ ಇತರ ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಸ್ಟಿಂಗ್‌ ಆಪರೇಷನ್‌ನ ತನಿಖೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಿರುವ ಸಿದ್ದರಾಮಯ್ಯ ಅವರು, ನ್ಯಾಯಸಮತ ಹಾಗೂ ನಿಷ್ಪಕ್ಷಪಾತ ತನಿಖೆಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.

ಪ್ರಕರಣದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಯವರ ಪಾತ್ರವಿದೆ ಎಂದು ಸಾಬೀತಾಗಿದೆ. ಇದರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಹಾಗೆಯೇ ಸ್ಟಿಂಗ್‌ ಆಪರೇಷನ್‌ನ ಪ್ರಮುಖ ಆರೋಪಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವುದಾಗಿ ಮೂಲಗಳು ತಿಳಿಸಿವೆ.

ನಿಗಮ ಮಂಡಳಿಗಳ ನೇಮಕಾತಿಗೆ ಈ ಹಿಂದೆ ಸಿದ್ಧಪಡಿಸಲಾದ ಪಟ್ಟಿಯನ್ನು ಅನುಸರಿಸಬೇಕು. ನಿಗಮ ಮಂಡಳಿಗಳ ನೇಮಕಾತಿಯನ್ನು ತ್ವರಿತಗೊಳಿಸಬೇಕು. ರಾಜಕೀಯ ವ್ಯವಹಾರಗಳ ಸಮಿತಿಯ ಶಿಫಾರಸುಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

Latest News