ಇಂದೋರ್, ನ. 2 (ಪಿಟಿಐ)- ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಮೂರು ದಿನಗಳ ವಾರ್ಷಿಕ ಸಭೆಯು ಇಂದಿನಿಂದ ಇಂದೋರ್ನಲ್ಲಿ ಆರಂಭಗೊಂಡಿದೆ. ಈ ಸಭೆಯಲ್ಲಿ ಆರ್ಎಸ್ಎಸ್ ಶತಮಾನೋತ್ಸವಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಪ್ರಸ್ತಾವಿತ ಸಾಂಸ್ಥಿಕ ಬದಲಾವಣೆಗಳು ಮತ್ತು ವಿವಿಧ ಸಮಕಾಲೀನ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಭೆಯನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ನಗರದ ಪ್ರತಿಷ್ಠಿತ ಡೇಲಿ ಕಾಲೇಜು ಆವರಣದಲ್ಲಿ ಈ ಸಭೆ ನಡೆಯುತ್ತಿದ್ದು, ಅಲ್ಲಿ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ. ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ಆರ್ಎಸ್ಎಸ್ನ ಪ್ರಮುಖ ಸಾಂಸ್ಥಿಕ ಅಂಗವಾಗಿದೆ. ದೇಶಾದ್ಯಂತ ಸುಮಾರು 400 ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇವರಲ್ಲಿ ಆರ್ಎಸ್ಎಸ್ ಪದಾಧಿಕಾರಿಗಳು ಹಾಗೂ ಸಂಘದಿಂದ ಪ್ರೇರಿತವಾದ 32 ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸೇರಿದ್ದಾರೆ ಎಂದು ಸಂಘದ ರಾಷ್ಟ್ರೀಯ ಸಹ ಪ್ರಚಾರ ಪ್ರಮುಖ್ ನರೇಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಆರ್ಎಸ್ಎಸ್ ಶತಮಾನೋತ್ಸವ ಆಚರಣೆಗಳ ಭಾಗವಾಗಿ ಕಳೆದ ಒಂದು ವರ್ಷದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು, ೞಪಂಚ ಪರಿವರ್ತನೞ ಅಭಿಯಾನ ಮತ್ತು ಸಂಘಟನೆಯ ವಿಸ್ತರಣೆಯ ಕುರಿತು ಈ ಸಭೆಯಲ್ಲಿ ಪರಾಮರ್ಶೆ ನಡೆಸಲಾಗುವುದು. ಅಲ್ಲದೆ, ಮುಂದಿನ ಅವಧಿಯಲ್ಲಿ ಇವುಗಳನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ಕಳೆದ ತಿಂಗಳು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ವಿಜಯದಶಮಿ ಉತ್ಸವದ ಭಾಷಣದಲ್ಲಿ ಮೋಹನ್ ಭಾಗವತ್ ಅವರು ಪ್ರಸ್ತಾಪಿಸಿದ ಸಮಕಾಲೀನ ವಿಷಯಗಳ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು. ಜೊತೆಗೆ, ಈ ವಿಷಯಗಳನ್ನು ಸಮಾಜದ ಮಟ್ಟಕ್ಕೆ ಕೊಂಡೊಯ್ಯುವ ಮಾರ್ಗಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ ಎಂದು ನರೇಂದ್ರ ಕುಮಾರ್ ತಿಳಿಸಿದರು.
ಸಭೆ ನಡೆಯುವ ಸ್ಥಳದಲ್ಲಿ ಒಂದು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಧಾರಾದಲ್ಲಿರುವ ಐತಿಹಾಸಿಕ ೞಭೋಜಶಾಲೆೞ ಸ್ಮಾರಕ, ಆರ್ಎಸ್ಎಸ್ನ ವಿವಿಧ ಚಟುವಟಿಕೆಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಪ್ರದರ್ಶನಗಳಿವೆ. ಆರ್ಎಸ್ಎಸ್ನ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿರುವ ಪಶ್ಚಿಮ ಮಧ್ಯಪ್ರದೇಶದ ಮಾಳ್ವಾ ಪ್ರದೇಶದಲ್ಲಿ ಈ ಸಭೆ ನಡೆಯುತ್ತಿದೆ. ದೇಶಾದ್ಯಂತ ಇತ್ತೀಚೆಗೆ ನಡೆದ ಹಲವು ಪ್ರತಿಭಟನೆಗಳು ಸಾಮಾಜಿಕ ಮತ್ತು ರಾಜಕೀಯ ಚರ್ಚೆಗಳ ಭಾಗವಾಗಿರುವ ಸಂದರ್ಭದಲ್ಲೇ ಈ ಸಭೆ ನಡೆಯುತ್ತಿರುವುದು ಗಮನಾರ್ಹ.
ಹೊಸ ಮಾಧ್ಯಮ ವೇದಿಕೆಗಳಲ್ಲಿನ ವಿಷಯಗಳು, ದೇಶದ ಆಂತರಿಕ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪ, ಜಾಗತಿಕ ಪರಿಸ್ಥಿತಿ ಮತ್ತು ಮಾದಕ ವಸ್ತುಗಳ ದುರ್ಬಳಕೆಯ (ಡ್ರಗ್್ಸ ಸಮಸ್ಯೆ)ಂತಹ ವಿಷಯಗಳ ಕುರಿತೂ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ ಎಂದು ಆರ್ಎಸ್ಎಸ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಆರ್ಎಸ್ಎಸ್ ಅನ್ನು ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರು 1925ರ ಸೆಪ್ಟೆಂಬರ್ 27ರಂದು, ವಿಜಯದಶಮಿಯ ದಿನದಂದು ನಾಗ್ಪುರದಲ್ಲಿ ಸ್ಥಾಪಿಸಿದರು. ಆರ್ಎಸ್ಎಸ್ ಪದಾಧಿಕಾರಿಗಳ ಪ್ರಕಾರ, ಈ ಸಂಘಟನೆಯು ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ದೈನಂದಿನ ಶಾಖೆಗಳನ್ನು ನಡೆಸುತ್ತಿದೆ ಮತ್ತು ಕಳೆದ ಒಂದು ವರ್ಷದಲ್ಲಿ 13,000ಕ್ಕೂ ಹೆಚ್ಚು ಹೊಸ ಶಾಖೆಗಳನ್ನು ಸೇರಿಸಿದೆ.
