ಬೆಂಗಳೂರು,ಏ.13- ನಗರದ ಕುಂದಲಹಳ್ಳಿಯ ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಶಂಕಿತ ಉಗ್ರರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ನ್ಯಾಯಾಲಯ ಹತ್ತು ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ವಶಕ್ಕೆ ನೀಡಿ ಆದೇಶ ನೀಡಿದೆ.
ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ನಿನ್ನೆ ಬಂಧನಕ್ಕೊಳಗಾಗಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ನಿವಾಸಿಗಳಾದ ಪ್ರಮುಖ ಆರೋಪಿ ಮುಸಾವಿರ್ ಹುಸೇನ್ ಶಬೀಬ್ ಹಾಗೂ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುತ್ತಿರುವ ಅಬುಲ್ದ್ ಮತೀನ್ ತಹಾನನ್ನು ಎನ್ಐಎ ಅಧಿಕಾರಿಗಳು ಕೋರಮಂಗಲದಲ್ಲಿರುವ ನ್ಯಾಯಾೀಧಿಶರ ಮುಂದೆ ಹಾಜರುಪಡಿಸಿದರು.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯ ಇರುವುದರಿಂದ 15 ದಿನಗಳ ಕಾಲ ವಶಕ್ಕೆ ನೀಡಬೇಕೆಂದು ಎನ್ಐಎ ಪರ ವಕೀಲರಾದ ಎಸ್ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಾೀಧಿಶರು ಬಂಧಿತ ಆರೋಪಿಗಳನ್ನು ಹತ್ತು ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ ಸಮುಚ್ಚಯದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಆರೋಪಿಗಳನ್ನು ನ್ಯಾಯಾೀಧಿಶರ ಮುಂದೆ ಹಾಜರುಪಡಿಸುವ ವೇಳೆ ಹೆಚ್ಚಿನ ಬಿಗಿಭದ್ರತೆಯನ್ನು ಒದಗಿಸಲಾಗಿತ್ತು.
ಇದಕ್ಕೂ ಮುನ್ನ ನಿನ್ನೆ ಬಂಧಕ್ಕೊಳಗಾಗಿದ್ದ ಇಬ್ಬರು ಆರೋಪಿಗಳನ್ನು ಕೋಲ್ಕತ್ತಾದಿಂದ ವಿಮಾನದಲ್ಲಿ ಭಾರೀ ಭದ್ರತೆಯಲ್ಲಿ ನಗರಕ್ಕೆ ಮಧ್ಯರಾತ್ರಿ 2 ಗಂಟೆಗೆ ಕರೆತರಲಾಯಿತು. ಬಳಿಕ ಅವರನ್ನು ಮಡಿವಾಳದಲ್ಲಿರುವ ಎಫ್ಎಸ್ಎಲ್ನ ಬಳಿ ಇರುವ ಇಂಟ್ರಾಗೇಷನ್ ಸೆಂಟರ್ನಲ್ಲಿ ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಕಲೆ ಹಾಕಲಾಯಿತು.
ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುದ್ದೆ ಬಡಾವಣೆಯ ನಿವಾಸಿಗಳಾಗಿರುವ ಅಬ್ದುಲ್ ಮತೀನ್ ತಹಾ ಮತ್ತು ಮುಸಾವಿರ್ ಹುಸೇನ್ ಶಬೀಬ್ ಐಸಿಸ್ ಪರ ಒಲವು ಹೊಂದಿರುವ ಉಗ್ರರು ಎಂದು ತಿಳಿದುಬಂದಿದೆ. ಈ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟ, ಶಿವಮೊಗ್ಗದ ತುಂಗಾ ನದಿ ಬಳಿ ಸಂಭವಿಸಿದ ಬಾಂಬ್ ಸ್ಪೋಟ ಹೀಗೆ ರಾಜ್ಯದ ನಾನಾ ಕಡೆ ನಡೆದಿರುವ ವಿಧ್ವಂಸಕ ಕೃತ್ಯಗಳಲ್ಲಿ ಇವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಕಳೆದ ಮಾ.1ರಂದು ಬೆಂಗಳೂರಿನ ಎಚ್ಎಎಲ್ನ ಕುಂದಲಹಳ್ಳಿ ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಬಾಂಬ್ಸೋಟ ಪ್ರಕರಣದಲ್ಲಿ ಎನ್ಐಎನಿಂದ ಬಂಧಕ್ಕೆ ಒಳಗಾಗಿರುವ ಈ ಇಬ್ಬರ ಕೈವಾಡ ಇರುವ ಕುರಿತು ವಿವಿಧ ಆಯಾಮಗಳಲ್ಲಿ ಎನ್ಐಎ ಮಾಹಿತಿ ಕಲೆ ಹಾಕುತ್ತಿದೆ.